)
ಕನ್ನಡಪ್ರಭ ವಾರ್ತೆ ಬೆಂಗಳೂರು
ದಕ್ಷಿಣ ಪಾಲಿಕೆ ವ್ಯಾಪ್ತಿಯ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಮಾರ್ಟ್ ಪಾರ್ಕಿಂಗ್ ಜಾರಿಗೆ 42 ರಸ್ತೆಗಳನ್ನು ಗುರುತಿಸಲಾಗಿದೆ. 31.65 ಕಿ.ಮೀ ಉದ್ದದ ರಸ್ತೆಯ ವಿವಿಧೆಡೆ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ನಿಗದಿಯಾಗಿದೆ. ಒಟ್ಟು 914 ಕಾರುಗಳು ಹಾಗೂ 3,835 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ.
ಪಾರ್ಕಿಂಗ್ ಶುಲ್ಕ ಸಂಗ್ರಹಿಸುವವರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮಷೀನ್ ಹೊಂದಿರುತ್ತಾರೆ. ಮೆಟ್ರೋ ರೈಲು ನಿಲ್ದಾಣ ಪಾರ್ಕಿಂಗ್, ಮಾಲ್‌ಗಳು ಮಾದರಿಯಲ್ಲೇ ವಾಹನಗಳ ಪ್ರವೇಶ ಸಮಯದ ವಿವರ ನಮೂದಿಸಿರುವ ಚೀಟಿಯನ್ನು ನೀಡಲಾಗುತ್ತದೆ. ಎಲ್‌ಇಡಿ ಫಲಕ, ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಸೂಚನಾ ಫಲಕಗಳು ಇರಲಿವೆ. ಪಾರ್ಕಿಂಗ್ ಸ್ಥಳಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದೆ.ಅನಧಿಕೃತ ಪಾರ್ಕಿಂಗ್ ಮಾಡಿದರೆ ಟೋಯಿಂಗ್: ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ, ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಪಾರ್ಕಿಂಗ್ ಗುತ್ತಿಗೆಯನ್ನು ಪಡೆದುಕೊಳ್ಳುವ ಸಂಸ್ಥೆಗಳೇ ಟೋಯಿಂಗ್ ವಾಹನಗಳನ್ನು ನಿಯೋಜಿಸಲಿವೆ.
ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕ ಗಂಟೆಗೆ 15 ರು. ಹಾಗೂ ಕಾರುಗಳಿಗೆ 30 ರು. ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ದಿನದ ಪಾಸ್ ಮತ್ತು ತಿಂಗಳ ಪಾಸ್ ಕ್ರಮವಾಗಿ 75 ರು. ಹಾಗೂ 150 ರು. ಹಾಗೂ ಮಾಸಿಕ ಪಾಸ್ ಕ್ರಮವಾಗಿ 1500 ರು. ಮತ್ತು 3,000 ರು. ನಿಗದಿಪಡಿಸಲಾಗಿದೆ.