ಕನಿಷ್ಠವೇತನ ನೀಡಿ, ಇಲ್ಲವಾದರೆ ಸೀರೆ ವಾಪಸ್‌ ಕಳುಹಿಸುತ್ತೇವೆ-ರೇವಣಕರ

KannadaprabhaNewsNetwork |  
Published : Mar 10, 2026, 03:15 AM IST
9ಎಚ್‌ವಿಆರ್2 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ನಮಗೆ ಸೀರೆ ಬೇಡ, ಕನಿಷ್ಠ ವೇತನ ಕೊಡಬೇಕು. ಇಲ್ಲದಿದ್ದರೆ ಗೌರವಧನವನ್ನು ಹೆಚ್ಚಳ ಮಾಡಬೇಕು. ಅದಾಗದಿದ್ದರೆ ಸರ್ಕಾರಕ್ಕೆ ಸೀರೆ ವಾಪಸ್‌ ಕಳುಹಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಸುನಂದಮ್ಮ ರೇವಣಕರ ಒತ್ತಾಯಿಸಿದರು.

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ನಮಗೆ ಸೀರೆ ಬೇಡ, ಕನಿಷ್ಠ ವೇತನ ಕೊಡಬೇಕು. ಇಲ್ಲದಿದ್ದರೆ ಗೌರವಧನವನ್ನು ಹೆಚ್ಚಳ ಮಾಡಬೇಕು. ಅದಾಗದಿದ್ದರೆ ಸರ್ಕಾರಕ್ಕೆ ಸೀರೆ ವಾಪಸ್‌ ಕಳುಹಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಸುನಂದಮ್ಮ ರೇವಣಕರ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಹೊರಡಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರು. ಹಾಗೂ ಸಹಾಯಕಿಯರಿಗೆ 10 ಸಾವಿರ ರು. ಕನಿಷ್ಠ ವೇತನ ನೀಡುವ ಭರವಸೆಯನ್ನು ಕೊಟ್ಟಿದ್ದರು. ಅಲ್ಲದೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ರಾಜ್ಯಕ್ಕೆ ಆಗಮಿಸಿದ್ದಾಗ ಕನಿಷ್ಠ ವೇತನ ಕೊಡುವ ಬಗ್ಗೆ ಮಾತನಾಡಿದ್ದರು. ಆದರೆ ಈ ಬಜೆಟ್‌ನಲ್ಲಿ ಕನಿಷ್ಠ ವೇತನವನ್ನೂ ಕೊಡದೇ ಗೌರವಧನವನ್ನು ಹೆಚ್ಚಿಸದೇ ಸೀರೆ ಕೊಡುವುದಾಗಿ ಘೋಷಿಸಿದ್ದಾರೆ. ನಾವು ಎಂದೂ ಸೀರೆ ಕೊಡಿ ಎಂದು ಕೇಳಿಲ್ಲ. ನಮಗೆ ಸೀರೆ ಕೊಡುವ ಅಗತ್ಯವಿಲ್ಲ, ನಮಗೆ ಗೌರವಧನ ಹೆಚ್ಚಿಸಬೇಕು. ಇಲ್ಲದಿದ್ದರೇ ನಾವೇ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸೇರಿಕೊಂಡು ಸರ್ಕಾರಕ್ಕೆ ಸೀರೆ ವಾಪಸ್ ಕೊಡುವ ಅಭಿಯಾನ ನಡೆಸುತ್ತೇವೆ ಎಂದು ಎಚ್ಚರಿಸಿದರು.ಒತ್ತಡ ಕಡಿಮೆ ಮಾಡಿ: ಯಾವುದೇ ಸರ್ವೇ ಕಾರ್ಯ ಬಂದರೂ ಅಂಗನವಾಡಿ ಕಾರ್ಯಕರ್ತೆಯರಿಂದಲೇ ಮಾಡಿಸುತ್ತಾರೆ. ಇದರ ಜತೆಗೆ ಬಿಎಲ್‌ಓ ಕೆಲಸ, ಪೋಷಣ್ ಟ್ರ್ಯಾಕ್ಟರ್ ತಂತ್ರಾಂಶದಲ್ಲೇ ನಮ್ಮ ಸಮಯ ವ್ಯರ್ಥವಾಗುತ್ತದೆ. ಕುಟಂಬದೊಂದಿಗೆ ಸಮಯ ಕೊಡಲಿಕ್ಕೆ ಆಗುತ್ತಿಲ್ಲ. ಇತ್ತ ಟಿಎ- ಡಿಎ ದರವೂ 30 ರು. ಗಿಂತ ಹೆಚ್ಚಿಲ್ಲ, ಗೌರವಧನವೂ ಕಡಿಮೆ ಇದೆ. ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ಸರಕಾರ ಮೊಬೈಲ್ ತಂತ್ರಾಂಶದ ಮೂಲಕ ಮಾಡಿಸುವ ಕೆಲಸದ ಒತ್ತಡವನ್ನು ಕಡಿಮೆ ಮಾಡಿಸಿ, ಕನಿಷ್ಠ ವೇತನ ಇಲ್ಲವೇ ಗೌರವಧನ ನೀಡುವಂತೆ ಆಗ್ರಹಿಸಿದರು.ಎಐಟಿಯುಸಿ ಉಪಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, 2011ರಿಂದ ಬಾಕಿ ಉಳಿದಿರುವ ಗ್ರಾಚ್ಯೂಟಿ ಹಣವನ್ನು ರಾಜ್ಯ ಸರ್ಕಾರ ಪಾವತಿಸಬೇಕು. ಜತೆಗೆ ಬಿಎಲ್‌ಓ ಕೆಲಸದಿಂದ ವಿಮುಕ್ತಿ ಕೊಡಿಸುವುದರ ಮೂಲಕ ಕನಿಷ್ಠ ವೇತನ ಅಥವಾ ಗೌರವಧನವನ್ನು ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಗಸಿಬಾಗಿಲ ಮಾತನಾಡಿ, ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ಕೊಡಿಸಬೇಕೆ ಹೊರತು ಸೀರೆ ಕೊಡ್ತಿವಿ ಎಂಬ ಘೋಷಣೆ ಸರಿಯಾದ ಕ್ರಮವಲ್ಲ. ಸೀರೆಯನ್ನು ನಿರ್ಗತಿಕರಿಗೆ ಕೊಡುತ್ತಾರೆ, ಅಂಗನವಾಡಿ ಕಾರ್ಯಕರ್ತೆಯರು ನಿರ್ಗತಿಕರಲ್ಲ. ಸರ್ಕಾರ ಈ ಘೋಷಣೆಯನ್ನು ಪುನರ್ ಪರಿಶೀಲಿಸಿ, ಸೀರೆ ಬದಲು ಕನಿಷ್ಠ ವೇತನ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಕಾಡಪ್ಪನವರ, ಹನುಮಂತಪ್ಪ ಮೂಲಿಮನಿ, ದುರಗಪ್ಪ ಯಳಗಚ್ಚಿ, ಪ್ರೇಮಾ ಬೂದಪ್ಪನವರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರಿನ ಮೇಲೆ ಕಂಟೈನರ್ ಬಿದ್ದು 8 ವರ್ಷದ ಮಗು ಬಲಿ
ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಕಂಟಕ