ರಂಗಭೂಮಿ ಕಲಾವಿದರ ಆರೋಗ್ಯ ವಿಮೆಗೆ ಹಣ ಪಾವತಿ: ಮಧು ಜಿ ಮಾದೇಗೌಡ ಭರವಸೆ

KannadaprabhaNewsNetwork | Published : Nov 16, 2024 12:34 AM

ಸಾರಾಂಶ

ಸದಾ ಒತ್ತಡದ ನಡುವೆ ಜೀವನ ನಡೆಸುತ್ತಿರುವ ಗ್ರಾಮಸ್ಥರು ಇಂತಹ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ರಂಗಭೂಮಿ ಕಲಾವಿದರ ಆರೋಗ್ಯಕ್ಕಾಗಿ ಅಪಘಾತ ಮತ್ತು ಆರೋಗ್ಯ ವಿಮೆಯ ಮೊದಲ ಕಂತಿನ ಹಣವನ್ನು ಪಾವತಿಸುವುದಾಗಿ ಶಾಸಕ ಮಧು ಜಿ.ಮಾದೇಗೌಡ ಭರವಸೆ ನೀಡಿದರು.

ರಂಗಭೂಮಿ ಚಾರಿಟೇಬಲ್ ಸೇವಾ ಟ್ರಸ್ಟ್, ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಕಾಲ ನಡೆಯುವ ನಾಟಕೋತ್ಸವದಲ್ಲಿ ಮಾತನಾಡಿದರು.

ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಮರೀಚಿಕೆಯಾಗಿದೆ. ಕಲಾವಿದರ ಬದುಕು ಸಾಕಷ್ಟು ಕಷ್ಟದಲ್ಲಿದ್ದರೂ ಇತರರನ್ನು ರಂಜಿಸಿ ಮನರಂಜನೆ ನೀಡುತ್ತಿದ್ದಾರೆ. ಹಾಗಾಗಿ ಕಲಾವಿದರ ಹೆಸರನ್ನು ಕೊಟ್ಟರೆ ಆರೋಗ್ಯ ವಿಮೆಯ ಮೊದಲ ಕಂತಿನ ಹಣವನ್ನು ಪಾವತಿ ಮಾಡಿಕೊಡುವುದಾಗಿ ತಿಳಿಸಿದರು.

ಸದಾ ಒತ್ತಡದ ನಡುವೆ ಜೀವನ ನಡೆಸುತ್ತಿರುವ ಗ್ರಾಮಸ್ಥರು ಇಂತಹ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರಂಗಭೂಮಿ, ನಾಟಕಗಳು ಕಣ್ಮರೆಯಾಗಿ ಮೊಬೈಲ್‌ನಲ್ಲಿ ಸಿಗುವ ಸಾಮಾಜಿಕ ಜಾಲತಾಣ, ಫೇಸ್‌ಬುಕ್, ಟ್ವಿಟರ್‌ಗೆ ಒಳಗಾಗಿ ಗ್ರಾಮೀಣ ಸೊಗಡು ಮರೆಯಾಗುತ್ತಿರುವುದಕ್ಕೆ ವಿಷಾದಿಸಿದರು.

ಹಿಂದಿನ ಕಾಲದಲ್ಲಿ ಹಬ್ಬ, ಹರಿದಿನ ಜಾತ್ರ ಸಂದರ್ಭಗಳಲ್ಲಿ ಪೌರಾಣಿಕ ನಾಟಕಗಳು ಪ್ರದರ್ಶನಗೊಂಡು ಜನರಿಗೆ ಮುದ ನೀಡುತ್ತಿದ್ದವು. ಇಂದು ಕೂಡ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ನಾಟಕ ವೀಕ್ಷಣೆಗೆ ಮುಂದಾಗುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ತೈಲೂರು ಸಿದ್ದರಾಜು ಮಾತನಾಡಿ, ನಾನು ಕಲಾವಿದನಾಗಿ ಹೊರಹೊಮ್ಮಲು ಪೊಲೀಸ್ ಇಲಾಖೆ ಜೊತೆಗೆ ಕಲಾವಿದರು, ನನ್ನ ಕುಟುಂಬದ ಪ್ರೋತ್ಸಾಹ ಕಾರಣ. ಪೊಲೀಸ್ ಇಲಾಖೆಯ ವೃತ್ತಿ ಜೀವನದೊಂದಿಗೆ ಪರಿಸರ ಸಂರಕ್ಷಣೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವುದು ನನಗೆ ಖುಷಿ ತಂದಿದೆ ಎಂದರು.

ಇದೇ ವೇಳೆ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರು ಮತ್ತು ಅಭಿಮಾನಿಗಳು ತೈಲೂರು ಸಿದ್ದರಾಜು ಅವರಿಗೆ ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ, ಬಂಗಾರದ ಕಡಗ ತೊಡಿಸಿ, ಪತ್ನಿ ಪವಿತ್ರರಿಗೆ ಬಂಗಾರದ ಸರ ಹಾಕಿ ಶಾಲು ಹೊದಿಸಿ ಅಭಿನಂದಿಸಿ ಗೌರವಿಸಿದರು.

ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಭರತೇಶ್, ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ತೈಲೂರು ರಘು, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ವಿಶ್ವಕರ್ಮ ಅಧ್ಯಕ್ಷೆ ಪವಿತ್ರ ಪ್ರಭಾಕರ್, ಮೈಸೂರು ರಾಮಪ್ಪ, ದೊಡ್ಡರಸಿನಕೆರೆ ಮಂಚೇಗೌಡ, ಗ್ರಾಪಂ ಸದಸ್ಯ ಕೆ.ಟಿ.ಶ್ರೀನಿವಾಸ್, ವಿನಯ್‌ಹೊನ್ನೇಗೌಡ, ಗೊಲ್ಲರದೊಡ್ಡಿ ಶಿವಲಿಂಗಯ್ಯ, ತಿಪ್ಪೂರು ಅಂದಾನಿ, ದೇವರಹಳ್ಳಿ ದೇವರಾಜು, ಬೀರೇಶ, ಪುಟ್ಟರಾಜು, ಚಿಕ್ಕಬೋರೇಗೌಡ, ಕಾಡುಕೊತ್ತನಹಳ್ಳಿ ರಾಜು, ಪ್ರಕಾಶಚಾರಿ, ಬುಲೆಟ್ ಬಸವರಾಜು, ಮಲ್ಲೇಶ್, ರಘುವೆಂಕಟೇಗೌಡ, ಎ.ಎನ್.ಮಹೇಶ್, ಗಜೇಂದ್ರ, ಬಿ.ಕೆ.ಜಯರಾಮು. ಕರಿಯಪ್ಪ, ಮೈಸೂರು ವಿಶ್ವಕ್ರರ್ಮ ಹಿಂದುಳಿದ ವರ್ಗದ ಅಧ್ಯಕ್ಷ ರಾಜಣ್ಣ, ರಘು, ಚಲುವ, ತೈಲೂರು ಅಣ್ಣಯ್ಯ, ಬೊಮ್ಮಯ್ಯ, ರಾಮಲಿಂಗಯ್ಯ, ರಾಜು, ಕನ್ನಡ ಜ್ಯೋತಿ ಯುವಕರ ಸಂಘದ ಪದಾಧಿಕಾರಿಗಳು ಸೇರಿದಂತೆ ರಂಗಭೂಮಿ ಕಲಾವಿದರು ಉಪಸ್ಥಿತರಿದ್ದರು.

Share this article