ಬೆಂಗಳೂರು : ಬಿಡಿಎ ವಸತಿ ಸಮುಚ್ಛಯದ ಫ್ಲಾಟ್‌ ಖರೀದಿಸುವಾಗಲೇ ನಿರ್ವಹಣ ಶುಲ್ಕ ಪಾವತಿ ಕಡ್ಡಾಯ

KannadaprabhaNewsNetwork |  
Published : Dec 08, 2024, 01:18 AM ISTUpdated : Dec 08, 2024, 09:21 AM IST
ಬಿಡಿಎ | Kannada Prabha

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಸಮುಚ್ಛಯದ (ಅಪಾರ್ಟ್‌ಮೆಂಟ್‌) ಫ್ಲಾಟ್‌ಗಳ ನಿರ್ವಹಣೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಫ್ಲಾಟ್‌ ಖರೀದಿದಾರರಿಂದಲೇ 1 ವರ್ಷದ ನಿರ್ವಹಣ ವೆಚ್ಚವನ್ನು ಮುಂಗಡವಾಗಿ ಪಡೆಯಲು ನಿರ್ಧರಿಸಿದೆ.

  ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಸಮುಚ್ಛಯದ (ಅಪಾರ್ಟ್‌ಮೆಂಟ್‌) ಫ್ಲಾಟ್‌ಗಳ ನಿರ್ವಹಣೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಫ್ಲಾಟ್‌ ಖರೀದಿದಾರರಿಂದಲೇ 1 ವರ್ಷದ ನಿರ್ವಹಣ ವೆಚ್ಚವನ್ನು ಮುಂಗಡವಾಗಿ ಪಡೆಯಲು ನಿರ್ಧರಿಸಿದೆ.

ಫ್ಲಾಟ್‌ನ್ನು ಖರೀದಿಸುವಾಗಲೇ ಫ್ಲಾಟ್‌ನ ಪೂರ್ಣ ಹಣದೊಂದಿಗೆ 1 ವರ್ಷದ ಫ್ಲಾಟ್‌ಗಳ ನಿರ್ವಹಣಾ ವೆಚ್ಚಕ್ಕೆ ಮುಂಗಡವಾಗಿ ಹೆಚ್ಚುವರಿಯಾಗಿ ಶೇ.1ರಷ್ಟು ಮೊತ್ತವನ್ನು ಪಡೆದು ಬಿಡಿಎ ನಿರ್ವಹಣೆ ಮಾಡಲಿದೆ. ಒಂದು ವೇಳೆ 1 ವರ್ಷದ ನಂತರ ಅಪಾರ್ಟ್‌ಮೆಂಟ್‌ ನಿವಾಸಿಗಳು ಕ್ಷೇಮಾಭಿವೃದ್ಧಿ ಅಥವಾ ಖರೀದಿದಾರರ ಸಂಘ ಮಾಡಿಕೊಂಡು ತಮ್ಮ ಫ್ಲಾಟ್‌ಗಳು ಒಳಗೊಂಡಂತೆ ಇಡೀ ಅಪಾರ್ಟ್‌ಮೆಂಟ್‌ ನಿರ್ವಹಣೆಯನ್ನು ಖುದ್ದು ಮಾಡಬೇಕು ಎಂಬ ನಿಯಮ ರೂಪಿಸಲಾಗಿದೆ.

ಕಾರಣಾಂತರಗಳಿಂದ ನಿವಾಸಿ ಕ್ಷೇಮಾಭಿವೃದ್ಧಿ ಇಲ್ಲವೇ ಖರೀದಿದಾರರ ಸಂಘವನ್ನು ರಚಿಸಿಕೊಂಡು ನಿರ್ವಹಿಸಲು ಸಾಧ್ಯವಾಗದಿದ್ದರೆ ಸಂಘವು ರಚನೆ ಆಗುವವರೆಗೂ ಪ್ರಾಧಿಕಾರವೇ ನಿರ್ವಹಣಾ ಶುಲ್ಕ ಪಾವತಿಸಿಕೊಂಡು ನಿರ್ವಹಿಸಲಿದೆ.

ಸಾರ್ವಜನಿಕರು ನೇರವಾಗಿ ಪ್ರಾಧಿಕಾರದಿಂದ ಫ್ಲಾಟ್‌ ಖರೀದಿಸಿದ್ದಲ್ಲಿ ಫ್ಲಾಟ್‌ ಮತ್ತು ನಿರ್ವಹಣಾ ವೆಚ್ಚವನ್ನು ಮಾತ್ರ ಪ್ರಾಧಿಕಾರಕ್ಕೆ ಪಾವತಿಸಬೇಕಾಗುತ್ತದೆ. ಇಲ್ಲವೇ ಗುರುತಿಸಲಾಗುವ ಖಾಸಗಿ ಮಾರುಕಟ್ಟೆ ಏಜೆಸ್ಸಿಗಳ ಮೂಲಕ ಸಾರ್ವಜನಿಕರಿಗೆ ವಿಲೇವಾರಿಯಾದ ಫ್ಲಾಟ್‌ಗಳಿಗೆ ಫ್ಲಾಟ್‌ ಪೂರ್ಣ ಮೊತ್ತದ ಶೇ.3ರಷ್ಟು ಸೇವಾ ಶುಲ್ಕವನ್ನು ಹಂಚಿಕೆಯಾದ ಫ್ಲಾಟ್‌ದಾರರಿಂದ ಪ್ರಾಧಿಕಾರದ ಖಾತೆಗೆ ಪಾವತಿಸಿಕೊಂಡು, ಫ್ಲಾಟ್‌ ಮಾರಾಟವಾದ ನಂತರ ಕ್ರಮಪತ್ರ ನೋಂದಣಿಯಾದ ನಂತರ ಏಜೆನ್ಸಿಯವರಿಗೆ ಪ್ರಾಧಿಕಾರ ಪಾವತಿಸಲಿದೆ.

ಫ್ಲಾಟ್‌ಗಳ ನಿರ್ವಹಣಾ ಶುಲ್ಕದಿಂದ ನೀರು, ವಿದ್ಯುತ್‌, ಸ್ವಚ್ಛತೆ, ಉದ್ಯಾನವನ, ಲಿಫ್ಟ್‌, ಈಜುಕೊಳ, ಕೊಳಚೆ ನೀರು ಸಂಸ್ಕರಣಾ ಘಟಕ, ವಿದ್ಯುತ್‌ ತ್ಯಾಜ್ಯ ವಿಲೇವಾರಿ ಸೇರಿ ಇತರೆ ಸಮಸ್ಯೆ ನಿರ್ವಹಿಸಲಾಗುವುದು. ಖಾಸಗಿ ಅಪಾರ್ಟ್‌ಮೆಂಟ್‌ಗಳಿಗೆ ಹೋಲಿಕೆ ಮಾಡಿದರೆ, ಪ್ರಾಧಿಕಾರದ ಅಪಾರ್ಟ್‌ಮೆಂಟ್‌, ಫ್ಲಾಟ್‌ ನಿರ್ವಹಣೆಗೆ ಅತ್ಯಂತ ಕಡಿಮೆ ನಿರ್ವಹಣಾ ಶುಲ್ಕವನ್ನು ಪಡೆಯಲಾಗುತ್ತಿದೆ. ಡಿ. 1ರಿಂದಲೇ ಈ ನಿಯಮ ಜಾರಿಗೆ ತರಲಾಗಿದೆ ಎಂದು ಬಿಡಿಎ ಹಣಕಾಸು ಸದಸ್ಯ(ಎಫ್‌ಎಂ) ಲೋಕೇಶ್‌ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ