ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಿಜವಾದ ಕಡುಬಡವರಿಗೆ, ನಿರಾಶ್ರಿತರಿಗೆ ಮನೆ ನೀಡಲು ಪಿಡಿಒಗಳು ಶ್ರಮಿಸಬೇಕು. ಜತೆಗೆ ಎಲ್ಲ ಗ್ರಾಮಗಳಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿದರೆ ಸೊಳ್ಳೆಗಳಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಕೋಳೂರು ಗ್ರಾಮದ ಕೊಟ್ಟೂರ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಗ್ರಾಪಂನಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಹಾಗೂ ಪುರಾತನ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಮುದಾಯ ಭವನದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಇದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ. ಸಾರ್ವಜನಿಕರ ಮೇಲು ಊರಿನ ಸ್ವಚ್ಛತೆ ಕಾಳಜಿ ವಹಿಸುವ ಜವಾಬ್ದಾರಿ ಇದೆ ಎಂದರು. ಇದಕ್ಕೆ ಜೆಜೆಎಂ ಸ್ಕೀಂ ಯೋಜನೆಯ ಸಮರ್ಪಕ ನಿರ್ವಹಣೆಯಾಗದಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ. ಶುದ್ಧ ನೀರಿನ ಘಟವೂ ಇಲ್ಲ, ಜನರಿಗೆ ಶುದ್ಧ ನೀರು ದೊರಕುತ್ತಿಲ್ಲ. ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು.
ಈ ರೀತಿ ಜೆಜೆಎಂ ಸ್ಕೀಮ್ ಯೋಜನೆ ಸರಿಯಾಗಿ ನಿರ್ವಹಣೆಯಾಗಿಲ್ಲ. ತಾತ್ಕಾಲಿಕ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ, ಕುಡಿಯುವ ನೀರು ಒದಗಿಸಲು ಯಾಕೆ ಪ್ರಯತ್ನಿಸಿಲ್ಲ ಎಂದು ಪಿಡಿಒ ವಿಜಯಲಕ್ಷ್ಮೀ ಮುದುಗಲ್ಲರನ್ನು ಶಾಸಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ನೀರಿನ ಸಮಸ್ಯೆ ಇಲ್ಲ. ಆದರೆ, ಗ್ರಾಮದ ಹಳೆ ಶುದ್ಧ ನೀರಿನ ಘಟಕವನ್ನು ಎರಡು ಮೂರು ಬಾರಿ ದುರಸ್ಥಿಗೊಳಿಸಲಾಗಿದೆ. ಒಂದೇ ಘಟಕದಿಂದ ಸಮರ್ಪಕ ಕುಡಿಯುವ ನೀರು ಒದಗಿಸಲು ಸಾಧ್ಯವಿಲ್ಲ. ಇನ್ನೊಂದು ಶುದ್ಧ ನೀರಿನ ಘಟಕದ ನಿರ್ಮಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟು ಚಾಲ್ತಿಯಲ್ಲಿವೆ, ಯಾವು ದುರಸ್ತಿಯಲ್ಲಿವೆ. ಹೊಸದಾಗಿ ಎಷ್ಟು ನಿರ್ಮಿಸಬೇಕಿದೆ ಎಂದು ಪಟ್ಟಿ ಕೊಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕರು ತಾಪಂ ಪ್ರಭಾರ ಸಹಾಯ ನಿರ್ದೇಶಕ ಖೂಬಾಶಿಂಗ್ ಜಾಧವಗೆ ಸೂಚಿಸಿದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಗ್ರಾಮದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ದುರಸ್ಥಿಗೊಳಿಸಿ ಕಂಪೌಂಡ್ ನಿರ್ಮಿಸಬೇಕಿದೆ. ಅದಲ್ಲದೇ ಕೋಳೂರು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ನಿರ್ಮಿಸಬೇಕು, ಗ್ರಾಮದಲ್ಲಿ ಬಹುತೇಕ ರಸ್ತೆಗಳು ಚಿಕ್ಕದಾಗಿದ್ದು, ಅಭಿವೃದ್ಧಿ ಪಡಿಸಬೇಕು. ಜತೆಗೆ ಕೋಳೂರಿಂದ ನೇಬಗೇರಿ ಮುಖ್ಯ ರಸ್ತೆ, ತಂಗಡಿಗಿಗೆ ಹೋಗುವ ಒಳ ರಸ್ತೆಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.ಸ್ಪಂದಿಸಿದ ಶಾಸಕರು, ಸದ್ಯ ಕೋಳೂರು ಸೇರಿ ತಾಲೂಕಿನ ಒಟ್ಟು 210 ಸರ್ಕಾರಿ ಶಾಲೆಗಳು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳ ಜೀರ್ಣೋದ್ಧಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಮಾಡದ ತಕ್ಷಣ ದುರಸ್ಥಿ ಮಾಡುವುದಾತಿ ತಿಳಿಸಿದರು. ಅಲ್ಲದೇ, ಕೋಳೂರದಿಂದ ಸರೂರು, ತಂಗಡಗಿ ಪ್ರಮುಖ ರಸ್ತೆಗಳ ನಿರ್ಮಿಸಲು ಯೋಜಿಸಲಾಗುವುದು. ಹಣಕಾಸಿನ ವ್ಯವಸ್ಥೆ ನೋಡಿಕೊಂಡು ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಎಷ್ಟು ಜನ ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ವಿವರಿಸಿದರು. ಮಂಗಳವಾರದಿಂದ ಅನುಷ್ಟಾನ ಸಮಿತಿ ನಡೆ ಫಲಾನುಭವಿಗಳ ಮನೆ ಕಡೆ ಎಂಬ ಕಾರ್ಯಕ್ರಮವನ್ನು ಶಾಸಕ ಅಪ್ಪಾಜಿ ನಾಡಗೌಡ ಚಾಲನೆ ನೀಡಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮನೆಮನೆಗೆ ನಮ್ಮ ಗ್ಯಾರಂಟಿ ಸಮಿತಿ ಸದಸ್ಯರೊಂದಿಗೆ ಸರ್ವೇ ಕಾರ್ಯ ಪ್ರಾರಂಭಿಸಲಾಗುವುದು. ವಂಚಿತ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಲಾಭ ತಲುಪಿಸುವ ಉದ್ದೇಶ ಇದಾಗಿದೆ ಎಂದು ತಿಳಿಸಿದರು.ಈ ವೇಳೆ ತಾಲೂಕು ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಬಿಇಒ ಬಿ.ಎಸ್.ಸಾವಳಗಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪಶು ವೈದ್ಯಾಧಿಕಾರಿ ಸುರೇಶ ಭಜಂತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಪಿಡಬ್ಲೂಡಿ ಎ.ಬಿ.ರೆಡ್ಡಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಕೋಟ್ರಾಜ್ಯದಲ್ಲಿ ಜಾತಿ ಜನಗಣತಿ ಪ್ರಾರಂಭವಾಗಿದೆ. ರಾಜಕೀಯ, ಶೈಕ್ಷಣಿಕವಾಗಿ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆ ಅಂತಹ ಸಮುದಾಯಗಳನ್ನು ಜಾತಿಗಣತಿ ಮೂಲಕ ಸರ್ವೇ ನಡೆಸಿ ಅವಕಾಶ ವಂಚಿತ ಸಮುದಾಯಗಳನ್ನು ಮೆಲೆತ್ತುವ ಉದ್ದೇಶವಿದೆ. ಇದರಿಂದ ಜಾತಿ, ಧರ್ಮ ಬೇರೆಯಾಗಲ್ಲ. ಇದರಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರವಿದೆ. ತಪ್ಪು ತಿಳುವಳಿಕೆಯ ಮಾತುಗಳಿಗೆ ಕಿವಿಗೊಡದೇ ಜಾತಿಗಣತಿಗೆ ಬಂದಾಗ ತಮ್ಮ ಮೂಲಜಾತಿಗಳ ಬಗ್ಗೆ ನಿಖರವಾಗಿ ನಮೂದಿಸಬೇಕು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.
ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷರು