ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಶನಿವಾರ ಅತ್ಯಂತ ಸಡಗರ, ಸಂಭ್ರಮದಿಂದ ಬಕ್ರೀದ್ ಹಬ್ಬ (ಈದುಲ್ ಅಝ್‌ಹಾ) ಆಚರಿಸಲಾಯಿತು.ನಗರದ ಬಾವುಟಗುಡ್ಡದ ಈದ್ಗಾ ಮಸ್ಜಿದ್‌ನಲ್ಲಿ ನಡೆದ ಈದ್ ನಮಾಝ್‌ಗೆ ಬಂದರ್‌ನ ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್‌ನ ಖತೀಬ್ ಸೈಯದ್ ಬಾಖಿರ್ ತಂಙಳ್ ನೇತೃತ್ವ ನೀಡಿದರು. ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣ ಮಾಡಿದರು. ಬಳಿಕ ಸಂದೇಶ ನೀಡಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಿದರೆ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಸದಾ ಅಶಾಂತಿಯಿಂದ ಇದ್ದರೆ ಸಮಾಜದ ಯಾವ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಇತ್ತೀಚೆಗೆ ದುಷ್ಕರ್ಮಿಗಳಿಂದ ಕೊಲೆಯಾದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್‌ನ ಮಗ್ಫಿರತ್‌ಗೆ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ವಿಶೇಷ ದುವಾ ಮಾಡಿದರು.ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್ ಮತ್ತು ಈದ್ಗಾ ಮಸೀದಿಯ ಅಧ್ಯಕ್ಷ ಯೇನೆಪೋಯ ಅಬ್ದುಲ್ಲ ಕುಂಞಿ ಶುಭಾಶಯ ಕೋರಿದರು.ಈ ಸಂದರ್ಭ ಡಿಸಿಪಿ ಸಿದ್ಧಾರ್ಥ ಗೋಯಲ್, ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್ ಮತ್ತು ಈದ್ಗಾ ಮಸೀದಿಯ ಉಪಾಧ್ಯಕ್ಷ ಕೆ. ಅಶ್ರಫ್, ಮಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕೋಶಾಧಿಕಾರಿ ಎಸ್‌ಎಂ ರಶೀದ್ ಹಾಜಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶ್ರಫ್ ಹಳೆಮನೆ, ಸಮದ್ ಹಾಜಿ, ಅದ್ದು ಹಾಜಿ ಮತ್ತಿತರರು ಇದ್ದರು.ದ.ಕ. ಜಿಲ್ಲೆಯ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿತು.ಮಕ್ಕಳಿಂದ ತೊಡಗಿ ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ಬಿರಿಯಾನಿ-ತುಪ್ಪದೂಟ, ವಿಶಿಷ್ಟ ಬಗೆಯ ತಿಂಡಿ-ತಿನಿಸು ಮಾಡಿ ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಿದರು. ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು.