ಗಂಗಾವತಿ: ನಾನು ಗೋವುಗಳ ಪ್ರೇಮಿಯಾಗಿದ್ದು, ಗೋವು ಪೂಜೆಯಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.ತಾಲೂಕಿನ ಆನೆಗೊಂದಿಯ ದುರ್ಗಾಬೆಟ್ಟದಲ್ಲಿರುವ ದುರ್ಗಾ ಮಾತಾ ಗೋಶಾಲ ಟ್ರಸ್ಟ್ ಬೆಂಗಳೂರಿನ ಶಿವ ಗೋಸೇವಾ ಮಂಡಲ್ ಚಾರಿಟಬಲ್ ಟ್ರಸ್ಟ್, ಗಂಗಾವತಿಯ ರಾಜಸ್ಥಾನ ಸಮಾಜ, ಗೋಸೇವಾ ಸಮಿತಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಏಕ್ ಶಾಮ್ ಗೋಮಾತಾ ಕೆ ನಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಾವಿರಾರು ಗೋ ಪ್ರೇಮಿಗಳಲ್ಲಿ ನಾನು ಒಬ್ಬನಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಹಳ ಸಂತೋಷವನ್ನು ತಂದಿದೆ ಎಂದರು.ನನಗೆ ಈ ಸೇವೆ ಮಾಡುವುದು ಪೂರ್ವಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ. ಇಂತಹ ಗೋ ಮಾತೆಯ ಪುಣ್ಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಪುಣ್ಯ. ಬಳ್ಳಾರಿಯಲ್ಲಿ ನನ್ನ ತಂದೆ, ತಾಯಿಯ ಹೆಸರಲ್ಲಿ ವೃದ್ಧಾಶ್ರಮ, ಅಂಗವಿಕಲ ಮಕ್ಕಳ ಶಾಲೆ ಹಾಗೂ ಗೋಶಾಲೆ ನಡೆಸುತ್ತಿದ್ದೇನೆ. ಬಳ್ಳಾರಿಯಿಂದ ನನ್ನನ್ನು ದೂರವಿಟ್ಟರೂ ಗಂಗಾವತಿಯಲ್ಲಿ ನಾನು ಶಾಸಕನಾಗಿದ್ದೇನೆ. ಇದು ನನ್ನ ಜೀವನದಲ್ಲಿಯೇ ಬಹುಮುಖ್ಯ ಕ್ಷಣಗಳಲ್ಲೊಂದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬ್ರಹ್ಮಾನಂದ ಸ್ವಾಮೀಜಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಿದರು.ನಂತರ ರಾಜಸ್ಥಾನದ ಪ್ರಖ್ಯಾತ ಗಾಯಕರಾದ ಓಂಜೀ ಮುಂಡೆಲ್ ದಿಗರನಾ ಮತ್ತು ರಮೇಶ್ ಮಾಳಿ ತಂಡದವರು ನಡೆಸಿದ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದಾಸೋಹ ರತ್ನ ಬ್ರಹ್ಮಾನಂದ ಸ್ವಾಮೀಜಿ, ರಾಜವಂಶಸ್ಥ ಶ್ರೀಕೃಷ್ಣ ದೇವರಾಯಲು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಬಸವರಾಜ್ ದಢೇಸೂಗೂರು, ಸಮಾಜ ಸೇವಕ ಹಾಗೂ ಗೋರಕ್ಷಕ ಮಹೇಂದ್ರ ಮುನ್ನೋತ ಜೈನ್ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.