ಶಾಂತಿ ಕದಡುವವರನ್ನು ಸುಮ್ಮನೆ ಬಿಡುವುದಿಲ್ಲ: ಕಮಿಷನರ್‌ ಶಶಿಕುಮಾರ

KannadaprabhaNewsNetwork |  
Published : Jul 05, 2024, 12:47 AM IST
ಎನ್‌. ಶಶಿಕುಮಾರ. | Kannada Prabha

ಸಾರಾಂಶ

ಗಾಂಜಾ ಉಪಯೋಗ ಇಂದು ದೊಡ್ಡ ಶೋಕಿಯಾಗಿ ಪರಿಣಮಿಸಿದೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದ್ದಾರೆ.

ಹುಬ್ಬಳ್ಳಿ:

ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ ಹಾಗೂ ಸಾರ್ವಜನಿಕರ ಶಾಂತಿ, ನೆಮ್ಮದಿ ಹಾಳು ಮಾಡುವವರನ್ನು ಸುಮ್ಮನೆ ಬಿಡುವ ಮಾತಿಲ್ಲ. ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಖಡಕ್‌ ಎಚ್ಚರಿಕೆ ನೀಡಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೌಡಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ರೌಡಿಗಳ ಪರೇಡ್ ನಡೆಸಲಾಗುವುದು. ಸಮಾಜದಲ್ಲಿ ಶಾಂತಿ ಕದಡುವವರು ಯಾರೇ ಆಗಿರಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಹಿಂದಿನ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯದಲ್ಲಿಯೇ ಎಲ್ಲ ಠಾಣೆಗೆ ಭೇಟಿ ನೀಡಿ, ಪ್ರಕರಣ ನಡೆದ ಸೂಕ್ಷ್ಮ ಪ್ರದೇಶಗಳಿಗೂ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅತೀ ಅವಶ್ಯಕವಾಗಿದೆ. ಚಾಕು ಸೇರಿದಂತೆ ಇತರೆ ಆಯುಧ ಹಿಡಿದುಕೊಂಡು ಶೋಕಿಗಾಗಿ ರಿಲ್ಸ್‌ ಮಾಡುವವರು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕು. ಅಂತಹವರ ಮೇಲೆಯೂ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಹು-ಧಾ ಮಹಾನಗರದಲ್ಲಿ ಗಾಂಜಾ, ಡ್ರಗ್ಸ್‌ ಮಾರಾಟಕ್ಕೆ ಕಡಿವಾಣ ಹಾಕುವ ಕುರಿತು ಕೇಳಿದ ಪ್ರಶ್ನೆಗೆ, ಗಾಂಜಾ ಉಪಯೋಗ ಇಂದು ದೊಡ್ಡ ಶೋಕಿಯಾಗಿ ಪರಿಣಮಿಸಿದೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಚೆನ್ನಮ್ಮ ಪಡೆಗೆ ಬಲ:

ಹೆಣ್ಣು ಮಕ್ಕಳ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಮಹಾನಗರದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಇರುವ ಚೆನ್ನಮ್ಮ ಪಡೆಗೆ ಮತ್ತಷ್ಟು ಬಲ ತುಂಬಲಾಗುವುದು. ಸಾರ್ವಜನಿಕರು ಸಹ ಹೆಣ್ಣು ಮಕ್ಕಳು ರಕ್ಷಣೆಗೆ ಮುಂದಾಗಬೇಕು. ಜತೆಗೆ ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಹಲ್ಲೆ ಮತ್ತು ದೌರ್ಜನ್ಯದ ಬಗ್ಗೆ ಧೈರ್ಯವಾಗಿ ಪೊಲೀಸರ ಮುಂದೆ ಹೇಳಿಕೊಳ್ಳಬೇಕು. 112 ಸಂಖ್ಯೆಗೆ ಕರೆ ಮಾಡಿ ಮಹಿಳೆಯರು ದೂರು ನೀಡಬಹುದಾಗಿದೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ