ಧರ್ಮ ಮಾರ್ಗದಲ್ಲಿ ಸಾಗಿದರೆ ಸಮಾಜದಲ್ಲಿ ಶಾಂತಿ: ರಂಭಾಪುರಿ ಸ್ವಾಮೀಜಿ

KannadaprabhaNewsNetwork |  
Published : Oct 25, 2026, 02:15 AM IST
ಧರ್ಮಸಭೆಯಲ್ಲಿ ರಂಭಾಪುರಿ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಧರ್ಮ ಎಂದರೆ ಜಾತಿ, ಸಮುದಾಯದ ಸೂಚಕವಲ್ಲ. ಮಾನವೀಯತೆಯೇ ನಿಜವಾದ ಧರ್ಮ. ಮನುಷ್ಯನಿಗೆ ಸಂಪತ್ತಿನಲ್ಲಿ ಕೊರತೆ ಇಲ್ಲ. ಆದರೆ ಬದುಕಿನಲ್ಲಿ ಶಾಂತಿ- ನೆಮ್ಮದಿ ಇಲ್ಲ. ಅದನ್ನು ಹೊಂದಲು ಧರ್ಮ ಮಾರ್ಗದಲ್ಲಿ ಸಾಗುವುದರಿಂದ ಬದುಕು ಶ್ರೇಷ್ಠವಾಗುತ್ತದೆ.

ಯಲ್ಲಾಪುರ: ಮನುಷ್ಯ ಸಂಕುಚಿತ ಮನೋಭಾವವನ್ನು ಬೆಳೆಸಿಕೊಂಡಿದ್ದಾನೆ. ಜಾತಿ ಧರ್ಮ ಪ್ರಾಂತ್ಯಗಳ ಹೆಸರಿನಲ್ಲಿ ದೊಂಬಿ ನಡೆಸಲಾಗುತ್ತಿದೆ. ಇದರಿಂದ ನಮಗೂ ಸಮಾಜಕ್ಕೂ ದೇಶಕ್ಕೂ ತೀವ್ರ ಹಾನಿಯಾಗುತ್ತದೆ. ಪ್ರತಿಯೊಬ್ಬರೂ ಧರ್ಮ ಸಹಿಷ್ಣುತಾ ಮನೋಭಾವ ಬೆಳೆಸಿಕೊಂಡು, ಧರ್ಮಮಾರ್ಗದಲ್ಲಿ ಸಾಗಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಅವರು ಶನಿವಾರ ಪಟ್ಟಣದ ಕಲ್ಮಠದ ಶಿವಸಾನಿಧ್ಯ ಸಭಾಭವನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದು ಯುವಜನರು ಸಂಸ್ಕಾರದ ಕೊರತೆಯಿಂದ, ಧರ್ಮದ ಆದರ್ಶ, ಮೌಲ್ಯಗಳನ್ನು ಅರಿತುಕೊಳ್ಳದೇ ಇರುವುದರಿಂದ ಧರ್ಮಪ್ರಜ್ಞೆ, ಭಾರತೀಯ ಸಂಸ್ಕೃತಿಯ ಆದರ್ಶ, ಮೌಲ್ಯಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಯುವಕರಿಗೆ ನಾಡಿನ ಧರ್ಮಪೀಠಗಳು ಸನ್ಮಾರ್ಗದಲ್ಲಿ ಸಾಗುವ ಮಾರ್ಗದರ್ಶನವನ್ನು ಸದಾ ನೀಡುತ್ತ ಬಂದಿವೆ.ಧರ್ಮ ಎಂದರೆ ಜಾತಿ, ಸಮುದಾಯದ ಸೂಚಕವಲ್ಲ. ಮಾನವೀಯತೆಯೇ ನಿಜವಾದ ಧರ್ಮ. ಮನುಷ್ಯನಿಗೆ ಸಂಪತ್ತಿನಲ್ಲಿ ಕೊರತೆ ಇಲ್ಲ. ಆದರೆ ಬದುಕಿನಲ್ಲಿ ಶಾಂತಿ- ನೆಮ್ಮದಿ ಇಲ್ಲ. ಅದನ್ನು ಹೊಂದಲು ಧರ್ಮ ಮಾರ್ಗದಲ್ಲಿ ಸಾಗುವುದರಿಂದ ಬದುಕು ಶ್ರೇಷ್ಠವಾಗುತ್ತದೆ. ಆ ದೃಷ್ಟಿಯಲ್ಲಿ ಶಿವಲಿಂಗಯ್ಯನವರಂಥ ವ್ಯಕ್ತಿಗಳು ಸಮಾಜದಲ್ಲಿ ಬೆಳೆದು ಬರಬೇಕು ಎಂದರು.ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಅಧ್ಯಕ್ಷ ಪ್ರಸಾದ್ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ ಸೇರಿದಂತೆ ಅನೇಕ ಹಿರಿಯರು ಶ್ರೀಗಳ ದರ್ಶನ, ಆಶೀರ್ವಾದ ಪಡೆದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ದಂಪತಿಗಳು ಶ್ರೀಗಳಿಗೆ ಫಲ ಸಮರ್ಪಿಸಿ ಗೌರವಿಸಿದರು. ರಂಭಾಪುರ ಗುರುಕುಲದ ಶಿಷ್ಯರು ವೇದಘೋಷ ಮಾಡಿದರು. ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಶಿವದೇವ ದೇಸಾಯಸ್ವಾಮಿ ಸ್ವಾಗತಿಸಿದರು. ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ದೇವಾಚಾರ್ಯ ಸ್ವಾಮೀಜಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ