ಹಾನಗಲ್ಲ: ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಮಾತ್ರ ಸಮುದಾಯದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಿದ್ದು, ಸ್ವತಂತ್ರ ಭಾರತದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವ, ದೇಶದ ಏಕತೆಗೆ ಬೇಕಾಗುವ ಎಲ್ಲ ಸಂಗತಿಗಳನ್ನು ರಾಷ್ಟ್ರದ ಧೀಮಂತ ಮಹಾಪುರುಷ ಡಾ. ಬಿ.ಅರ್. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ್ದಾರೆ ಎಂದು ಸಮಾಜ ಸೇವಕ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಹೇಳಿದರು.
ಉಪನ್ಯಾಸ ನೀಡಿದ ಕಿರಣ ಹೂಗಾರ ಅವರು, ಅವಮಾನಗಳನ್ನು ಸಹಿಸಿಕೊಂಡು, ಸಮಾನತೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಎಲ್ಲರಿಗೂ ಸಮಬಾಳು ಸಮಪಾಲು ಎಂಬ ಸತ್ಯವನ್ನು ಅರುಹಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಡೀ ಜಗತ್ತಿಗೆ ಮಾದರಿಯಾಗಿವೆ. ಸ್ವತಂತ್ರ ಭಾರತ ೭ ದಶಕಗಳನ್ನು ದಾಟಿದರೂ ಅಲ್ಲಲ್ಲಿ ಅಸ್ಪೃಶ್ಯತೆಯ ಆಚರಣೆ ಇರುವುದು ಖೇದಕರ. ಭಾರತದಲ್ಲಿ ಎಲ್ಲರೂ ಸಮಾನರು ಎಂಬುದು ಸಾಬೀತಾದಾಗ ಮಾತ್ರ ಭಾರತಮಾತೆ ನೆಮ್ಮದಿ ನಿಟ್ಟುಸಿರು ಬಿಡಬಲ್ಲಳು. ಎಲ್ಲರಿಗೂ ಶಿಕ್ಷಣ, ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆಯೇ ಡಾ. ಬಿ.ಅರ್. ಅಂಬೇಡ್ಕರ ಅವರ ಧ್ಯೇಯವಾಗಿತ್ತು ಎಂದರು.
ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಎಚ್.ಡಿ. ಜಾವೂರ, ಗಣ್ಯರಾದ ರಾಮು ಯಳ್ಳೂರ, ನೀಲಕಂಠ, ಮಹೇಶ ಹಿರೇಮಠ, ಬಸವರಾಜ ಹಾದಿಮನಿ, ಗದಿಗೆಯ್ಯ ಹಿರೇಮಠ, ಸಮೀರ ಬಾಳೂರ, ಘಟಕದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.