ಕೊಪ್ಪಳ: ಜಗತ್ತಿನ ಹಲವು ಭಾಗಗಳಲ್ಲಿ ಯುದ್ಧಗಳು ನಡೆಯುತ್ತಿವೆ.ಇವುಗಳನ್ನು ನೈಜವಾಗಿ ನೋಡುವ ದೌರ್ಭಾಗ್ಯ ನಮ್ಮದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಭಾರತದ ಪಕ್ಕದಲ್ಲಿಯೇ ಇರುವ ಪಾಕಿಸ್ತಾನಕ್ಕೆ ಅಮೇರಿಕಾ ಶಸ್ತ್ರಾಸ್ತ್ರ ನೀಡಿ ಯುದ್ಧ ಮಾಡಲು ಪ್ರೇರೇಪಿಸುತ್ತದೆ. ಅತ್ತ ಉಕ್ರೇನ್ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದೆ. ಹೀಗೆ ಜಗತ್ತಿನಾದ್ಯಂತ ಯುದ್ಧದಾಹಿಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿಯ ಅಗತ್ಯವಿದೆ ಎಂದು ಹೇಳಿದರು.
ಪರಸ್ಪರವಾಗಿ ಅನ್ಯೋನ್ಯ, ಪ್ರೀತಿಯಿಂದ ಇರಬೇಕಾದ ಕಾಲದಲ್ಲಿ ಯುದ್ಧ ನೋಡುವ ದೌರ್ಭಾಗ್ಯ ನಮ್ಮದಾಗಿದೆ ಎಂದು ವಿಷಾಧಿಸಿದರು.ನಮ್ಮ ಪಕ್ಕದಲ್ಲಿಯೇ ಇರುವ ಫಕೀರೇಶ್ವರ ಮಠ ಕೇವಲ ನಾಡಿನಲ್ಲಿ ಅಷ್ಟೇ ಅಲ್ಲ, ರಾಷ್ಟ್ರಾದ್ಯಂತ ಅದಕ್ಕೆ ಮಹತ್ವವಿದೆ. ಅಲ್ಲಿ ಇರುವಿಕೆ ಯಾವ ಜಾತಿ ಮತ್ತು ಧರ್ಮ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವನ್ನು ಅಷ್ಟೇ ಪ್ರೀತಿಯಿಂದ ಆಚರಣೆ ಮಾಡಲಾಗುತ್ತದೆ. ಇಂಥ ಮಠಗಳು ನಮಗೆ ಬೇಕಾಗಿದೆ ಎಂದರು.
ವಿಪ ಸದಸ್ಯ ಬಿ.ಕೆ. ಹರಿಪ್ರಸಾದ, ಕ್ರಿಕೆಟ್ ಆಟಗಾರ ಹಾಗೂ ತೆಲಂಗಾಣ ವಿಧಾನಪರಿಷತ್ ಸದಸ್ಯ ಮೊಹ್ಮದ್ ಅಜರುದ್ದೀನ, ಆಯೋಜಕ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಬದುಕು ಸಾಗಿಸಲು ಮಹ್ಮದ್ ಫೈಗಂಬರ್ ಸಂದೇಶಗಳು ಬಹಳ ಮುಖ್ಯ ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ, ಸಂಸದ ರಾಜಶೇಖರ ಹಿಟ್ನಾಳ, ಹಸನಸಾಬ್ ದೋಟಿಹಾಳ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕೆ. ಬಸವರಾಜ ಹಿಟ್ನಾಳ, ಸುರೇಶ ಭೂಮರಡ್ಡಿ, ಕೆ. ಎಂ.ಸಯ್ಯದ್, ಕಾಟನ್ ಪಾಶಾ, ಅಮರೇಶ ಕರಡಿ, ರಾಜಶೇಖರ ಅಡೂರು, ಆಸಿಫ್ ಅಲಿ, ಎಚ್.ಆರ್. ಶ್ರೀನಾಥ ಇದ್ದರು.ಕೆ.ಎಂ.ಸಯ್ಯದ್ ಸ್ವಾಗತಿಸಿದರು.ನಜೀರ ಅಹ್ಮದ್ ಮುಕ್ತಿ ಸಾಹೇಬ್ ಪ್ರಾಸ್ಥಾವಿಕವಾಗಿ ಮಾತನಾಡಿದರು.