ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಯಾಂತ್ರಿಕ, ಐಷಾರಾಮಿ ಬದುಕಿಗೆ ಜೋತು ಬಿದ್ದು ಮನುಷ್ಯ ಮಾನಸಿಕ ಒತ್ತಡದ ಬದುಕಿಗೆ ಒಳಗಾಗುತ್ತಿದ್ದಾರೆ ಎಂದು ಸಮಾಜ ಸೇವಕ ಸನತ್‌ಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಒತ್ತಡ ದಿನಾಚರಣೆಯಲ್ಲಿ ಮಾತನಾಡಿ, ಒತ್ತಡ ಎಂಬುದು ಎಲ್ಲರಲ್ಲೂ ಒಂದು ರೀತಿ ಅವಿಭಾಜ್ಯ ಅಂಗವಾಗಿದೆ. ಸರಳ ಬದುಕು, ಉತ್ತಮ ಆಲೋಚನೆ ಚಿಂತನೆಗಳಿಲ್ಲದೆ ಕ್ಷಣಿಕ ಆಸೆ, ಆಮಿಷಕ್ಕೆ ಒತ್ತಡವನ್ನು ಸ್ವಯಂ ತಂದುಕೊಳ್ಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೈನಂದಿನ ಚಟುವಟಿಕೆಯಾಗಿ ಯೋಗ, ಧ್ಯಾನ, ಪ್ರಾಣಾಯಾಮ, ವಾಯುವಿಹಾರ, ನಡಿಗೆ, ಉತ್ತಮ ಪುಸ್ತಕ ಓದುವ ಹವ್ಯಾಸ ಒತ್ತಡವನ್ನು ದೂರ ಮಾಡಿ ನೆಮ್ಮದಿ ಕೊಡುವ ತಾಣವಾಗಲಿದೆ ಎಂದರು.ಪ್ರಾಂಶುಪಾಲ ಎಂ.ಆರ್.ಸಹದೇವ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂಬ ಭಯ ಒತ್ತಡವಾಗಿದೆ. ಭಯದಿಂದ ಎಲ್ಲವೂ ಮರೆಯುವಿಕೆ ಎನ್ನುವಂತಾಗಿದೆ. ಅಂದಿನ ಪಠ್ಯ ಅಂದೇ ಓದಿ ಮುಗಿಸಿದರೆ ಪರೀಕ್ಷೆ ಭಯದ ಒತ್ತಡ ದೂರವಾಗಲಿದೆ. ಐಷಾರಾಮಿ ಬದುಕಿಗೆ ವಿಶ್ರಾಂತಿ ಇಲ್ಲದೆ ದುಡಿಮೆ, ಉದ್ಯೋಗಸ್ಥರಲ್ಲಿ ಕೆಲಸದ ಒತ್ತಡ, ದುರ್ಬಲ ವರ್ಗಕ್ಕೆ ಆರ್ಥಿಕ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಪುಟ್ಟ ಮಕ್ಕಳಿಂದ ದೊಡ್ಡವರಿಗೆ ಮೊಬೈಲ್ ಟೈಂಪಾಸ್, ಮನೋರಂಜನೆ ವಸ್ತುವಾದರೆ, ಯುವಕರಿಗೆ ಕೆಟ್ಟ ಚಟವಾಗಿ ಚಾಟಿಂಗ್ ಮತ್ತಿತರ ಕುಕೃತ್ಯಗಳಿಗೆ ಬಳಸಿ ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಕಚೇರಿ ಮೇಲ್ವಿಚಾರಕ ಬಿ.ಎಸ್.ಚಿಕ್ಕರಸೇಗೌಡ, ಹಿರಿಯ ಆರೋಗ್ಯ ಸಹಾಯಕ ನಾಗೇಂದ್ರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಕುಮಾರಸ್ವಾಮಿ, ಉಪನ್ಯಾಸಕರಾದ ಮಂಜುನಾಥ್ ಹರೀಶ್, ನಾಗೇಶ್, ವಿನಾಯಕ, ಫಾಜಿಲಾ ಖಾನಂ, ಚಂದ್ರಿಕಾ, ಲಾವಣ್ಯ ಇದ್ದರು.