ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆರೆ ಕೋಡಿಯಮ್ಮ ದೇವಸ್ಥಾನದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಮತ್ತು ಬೆಳವಣಿಗೆಗೆ ಸಮಾಜ ಸದಾ ಬದ್ಧವಾಗಿರಬೇಕು ಎಂದು ಕರೆ ನೀಡಿದರು. ಮಠ- ಮಂದಿರಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೈತಿಕ ಮೌಲ್ಯಗಳು ಹಾಗೂ ಮಾನವೀಯತೆಯನ್ನು ಬಲಪಡಿಸುವ ಕೇಂದ್ರಗಳಾಗಿವೆ. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದ್ದು, ಜನರಲ್ಲಿ ಸತ್ಪ್ರವೃತ್ತಿಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಭಗವಂತನು ಪ್ರಾಣಿ- ಪಕ್ಷಿಗಳಿಗೆ ಸಾಮಾನ್ಯ ಜ್ಞಾನವನ್ನು ನೀಡಿದ್ದರೆ, ಮನುಷ್ಯನಿಗೆ ಮಾತ್ರ ವಿಶಿಷ್ಟವಾದ ಬುದ್ಧಿಶಕ್ತಿ ಮತ್ತು ಉನ್ನತ ಜ್ಞಾನಾರ್ಜನೆ ಮಾಡುವ ಸಾಮರ್ಥ್ಯವನ್ನು ಕರುಣಿಸಿದ್ದಾನೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬುದ್ಧಿಶಕ್ತಿಯನ್ನು ಸತ್ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಉನ್ನತ ಚಿಂತನೆಗಳನ್ನು ಬೆಳೆಸಿಕೊಂಡು ಸಮಾಜಮುಖಿ ಜೀವನ ನಡೆಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ಸತ್ಕಾರ್ಯಗಳು ಎಂದಿಗೂ ಶಾಶ್ವತವಾಗಿದ್ದು, ಮನುಷ್ಯನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುತ್ತವೆ. ದುಷ್ಚಟಗಳು ಮತ್ತು ದುರಭ್ಯಾಸಗಳಿಂದ ದೂರವಿದ್ದು, ಸದ್ಗುಣಗಳನ್ನು ಅಳವಡಿಸಿಕೊಂಡರೆ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಆತ್ಮತೃಪ್ತಿ ದೊರೆಯುತ್ತದೆ. ಯಾವುದೇ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕಾದರೆ ಅವನ ಜೀವನದಲ್ಲಿ ಸ್ಪಷ್ಟ ಗುರಿ ಇರಬೇಕು. ಗುರಿಯತ್ತ ನಿರಂತರ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಸಾಗಿದರೆ ಸಾಧನೆ ಸಾಧ್ಯ ಎಂದು ಕಿರಿಯ ಶ್ರೀಗಳು ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಹಾಸನ ತಾಲೂಕು ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಮಂಜುನಾಥ್, ಉಪಾಧ್ಯಕ್ಷ ಮಧುಸೂಧನ್, ಸದಸ್ಯ ಕಿರಣ್ ಕುಮಾರ್ ಸೇರಿ ಅನೇಕ ಗಣ್ಯರು, ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.