ಗದಗ: ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವುದರಿಂದ ಸಮಾಜದಲ್ಲಿ ಶಾಂತಿ ಸಮೃದ್ಧಿ ನೆಲಸಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಗುರುವಾರ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ದತ್ತಾ ಗ್ರೂಪ್ 5ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದತ್ತಾ ಗ್ರೂಪ್ ಕೇವಲ 5 ವರ್ಷಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿದೆ, ಸಮಾಜಕ್ಕೆ ಸಂಸ್ಥೆಯಿಂದ ಇನ್ನು ಹೆಚ್ಚಿನ ಕೆಲಸ ಕಾರ್ಯಗಳು ನಡೆಯಲಿ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಮೂಲಕ ದತ್ತಾ ಗ್ರೂಪ್ ಈ ಭಾಗದ ಜನರ ಕಷ್ಟಗಳು ದೂರಾಗಬೇಕು ಎನ್ನುವ ಸದುದ್ದೇಶ ಹೊಂದಿದೆ. ದತ್ತಾ ಗ್ರೂಪ್ ಭವಿಷ್ಯದಲ್ಲಿ ಜನರ ವಿಶ್ವಾಸ ಉಳಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ಆಶಿಸಿದರು.ದೇವರು ಅವಕಾಶ ಕೊಟ್ಟಾಗ ಅದನ್ನು ಸದುಪಯೋಗ ಮಾಡಿಕೊಂಡು, ಒಗ್ಗಟ್ಟು, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡಾಗ ಯಾವುದೇ ಸಂಸ್ಥೆಗಳು ಯಶಸ್ವಿಯಾಗಿ ಬೆಳೆಯುತ್ತವೆ ಎಂದರು.
ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ದತ್ತಾ ಗ್ರೂಪ್ ಸದಸ್ಯರು ಗಳಿಸಿದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿದ್ದಾರೆ. ಕಾಯಕದಿಂದ ಬಂದ ಹಣ ದಾಸೋಹಕ್ಕೆ ವಿನಿಯೋಗಿಸಿದ್ದು ಶ್ಲಾಘನೀಯ ಎಂದರು.ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಗದಗ ಸರ್ವಧರ್ಮ ಸಮನ್ವಯ, ದಾನ- ಧರ್ಮದ ಪುಣ್ಯಕ್ಷೇತ್ರ. ದತ್ತಾ ಗ್ರೂಪ್ ಹಮ್ಮಿಕೊಂಡಿರುವ ಶ್ರೀನಿವಾಸ ಕಲ್ಯಾಣೋತ್ಸವ ಸಮಾಜದ ಕಲ್ಯಾಣೋತ್ಸವ. ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದತ್ತಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಭೂಮಾ, ದತ್ತಾ ಗ್ರೂಪ್ 5 ವರ್ಷದಲ್ಲಿ 27 ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವ್ಯವಹಾರದ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಮಣಕವಾಡದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಲ್‌ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ, ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ ಪಾಟೀಲ ಮುಂತಾದವರು ಮಾತನಾಡಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ವಿದ್ಯಾದಾನ ಶಿಕ್ಷಣ ಸಂಸ್ಥೆ ಚೇರ್ಮನ್ ಧೀರಣ್ಣ ಹುಯಿಲಗೋಳ, ಕಾನೂನು ವಿವಿ ಸಿಂಡಿಕೇಟ್ ಸದಸ್ಯ ವಸಂತ ಲದ್ವಾ, ಏಕನಾಥ ಇರಕಲ್ ವೇದಿಕೆ ಮೇಲಿದ್ದರು. ಬಾಹುಬಲಿ ಜೈನರ ನಿರೂಪಿಸಿದರು. ದತ್ತಾ ಗ್ರೂಪ್‌ನ ನಾರಾಯಣ ಕುಡತರಕರ ಸ್ವಾಗತಿಸಿದರು. ಎಸ್.ಎಚ್. ಶಿವನಗೌಡರ, ರಾಘವೇಂದ್ರ ಬಾರಡ, ಸದಾಶಿವ ಚನ್ನಪ್ಪನವರ, ಜಹೀರ ತಾಡಪತ್ರಿ ಉಪಸ್ಥಿತರಿದ್ದರು.ಖ್ಯಾತ ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ, ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಬೆಂಗಳೂರು ಹಾಗೂ ತಿರುಪತಿಯ ಶ್ರೀ ಶ್ರೀವಾರಿ ಫೌಂಡೇಶನ್ ಅರ್ಚಕರು ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿದರು.