ಸಂಘವು 2019ರಿಂದ ಬೈಲಾ ಹಾಗೂ ಸಹಕಾರ ಇಲಾಖೆ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಜವಾಬ್ದಾರಿಗಳನ್ನು ಬೈಲಾದಲ್ಲೇ ಸ್ಪಷ್ಟವಾಗಿ ನಿರ್ಧರಿಸಲಾಗಿದೆ.
ಗದಗ: ರಾಜ್ಯ ಸರ್ಕಾರಿ ನೌಕರರ ಸಂಘದ 5ನೇ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಭಾನುವಾರ ನಗರದ ಪಂ. ಭೀಮಸೇನ್ ಜೋಷಿ ರಂಗಮಂದಿರದಲ್ಲಿ ಜರುಗಿತು.
ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಕುಟುಂಬಗಳಿಗೆ ನೆಮ್ಮದಿಯ ಬದುಕು ಒದಗಿಸುವುದು ಸಂಘದ ಮುಖ್ಯ ಗುರಿಯಾಗಿದೆ. ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಿಖರವಾಗಿ ಅನುಷ್ಠಾನವಾಗಬೇಕು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆ 1 ಸಾವಿರಕ್ಕೆ ತಲುಪಿದೆ. ಸಂಘದಲ್ಲಿ ಐದು ಸಾವಿರಕ್ಕೂ ಅಧಿಕ ಪದಾಧಿಕಾರಿಗಳು ಸಂಘಟಿತರಾಗಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಎಲ್ಲ ಸದಸ್ಯರಿಗೆ ತಲುಪಬೇಕು. ಸಂಘದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಸುಧಾರಣೆ ಅಗತ್ಯ ಎಂದರು.
ಸಂಘವು 2019ರಿಂದ ಬೈಲಾ ಹಾಗೂ ಸಹಕಾರ ಇಲಾಖೆ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಜವಾಬ್ದಾರಿಗಳನ್ನು ಬೈಲಾದಲ್ಲೇ ಸ್ಪಷ್ಟವಾಗಿ ನಿರ್ಧರಿಸಲಾಗಿದೆ. ಇದೇ ನಮ್ಮ ಸಂವಿಧಾನ, ಇದೇ ಅಂತಿಮ. 2022ರಲ್ಲಿ ಸಂಘದ ಬೈಲಾಗೆ ತಿದ್ದುಪಡಿ ಮಾಡಿ ಎಲ್ಲ ಜಿಲ್ಲೆಗಳಲ್ಲೂ ಸಂಘದ ಸಭೆಗಳನ್ನು ಮಾಡುವಂತೆ ತಿದ್ದುಪಡಿ ಮಾಡಲಾಯಿತು.
ಸಂಘವು ಎಲ್ಲ ಜಿಲ್ಲೆ, ತಾಲೂಕು, ಹೋಬಳಿಗಳಿಗೆ ವಿಸ್ತರಿಸುವ ಮುಖ್ಯ ಉದ್ದೇಶ ಹೊಂದಲಾಗಿದೆ. ಸಂಘವು ಸರಿಯಾಗಿ ದಿಕ್ಕಿನಲ್ಲಿ ಸಾಗಲು ಕೆಲಮೊಮ್ಮೆ ಕಠಿಣ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಸಂಘವು ಅನುಭವ ಮಂಟಪದಂತೆ ಇರಬೇಕು. ಇಲ್ಲಿ ಜಾತಿ, ಧರ್ಮ, ಪಂಥಕ್ಕೆ ಸ್ಥಾನವಿಲ್ಲ ಎಂದರು.
ರವಿ ಗುಂಜಿಕರ, ಬಸವರಾಜ ಬಳ್ಳಾರಿ, ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ, ಎಂ.ಎಂ. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.ಅನುಭವ ಮಂಟಪದಂತಿದೆ
ಈ ಮೊದಲು ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಗಳಿಗೆ 30ರಿಂದ 50 ಜನ ಮಾತ್ರ ಸೇರುತ್ತಿದ್ದರು. ಬೆಂಗಳೂರಿನಲ್ಲಿ ಸಭೆಗಳು ಜರುಗುತ್ತಿದ್ದರಿಂದ ಮಧ್ಯಾಹ್ನ ನಂತರ ಸಭೆಗೆ ಹಾಜರಾಗುತ್ತಿರಲಿಲ್ಲ. ಆದರೆ ಈಗ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಹೊಸ ಆಯಾಮವನ್ನು ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ನೀಡಿದ್ದಾರೆ. ಅನುಭವ ಮಂಟಪದ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಸವರಾಜ ಬಳ್ಳಾರಿ ಅವರಲ್ಲಿರು ಸಂಘಟನೆ ನೈಪುಣ್ಯತೆಯನ್ನು ರಾಜ್ಯ ಸಂಘದಲ್ಲಿ ಅವಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.