ಶಾಂತಿಯಿಂದ ನಡೆದ ‘ಲೋಕ’ ಚುನಾವಣಾ ಮತದಾನ

ತಾಲೂಕಿನಾದ್ಯಂತ ಶುಕ್ರವಾರ ನಡೆದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಶಾಂತಿ- ಸುವ್ಯವಸ್ಥೆಯಿಂದ ನಡೆಯಿತು.

KannadaprabhaNewsNetwork | Published : Apr 26, 2024 7:32 PM IST

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನಾದ್ಯಂತ ಶುಕ್ರವಾರ ನಡೆದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಶಾಂತಿ- ಸುವ್ಯವಸ್ಥೆಯಿಂದ ನಡೆಯಿತು. ಮತಗಟ್ಟೆಗಳಲ್ಲಿ ಬೆಳಿಗ್ಗೆ ೭ ರಿಂದಲೇ ಆರಂಭವಾದ ಮತದಾನ ಸಂಜೆ ೬ಗಂಟೆಯವರೆಗೂ ನಡೆದು ಶೇ ೮೦ಕ್ಕೂ ಹೆಚ್ಚಿನ ಮತದಾನವಾಗಿದೆ.

ತಾಲೂಕಿನ ಕೆಲವೆಡೆ ತಾಂತ್ರಿಕ ದೋಷಗಳಂತಹ ಸಣ್ಣಪುಟ್ಟ ತೊಂದರೆಗಳು ಬಿಟ್ಟರೆ, ಬೇರಾವುದೇ ತೊಂದರೆಗಳೂ ಕಂಡುಬರಲಿಲ್ಲ. ಪ್ರತಿಬೂತ್‌ನಲ್ಲೂ ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿತ್ತು. ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಬೆಳಿಗ್ಗೆ ತುಸು ಹೆಚ್ಚು ಮತದಾನವಾಗಿತ್ತು, ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೆಚ್ಚಿನ ಮತದಾರರು ಮತಗಟ್ಟೆಗೆ ಬರಲಿಲ್ಲ, ಸಂಜೆ ವೇಳೆಗೆ ಹೆಚ್ಚಿನ ಮತದಾನವಾಯಿತು.

ಗಮನ ಸೆಳೆದ ಪಿಂಕ್ ಮತಗಟ್ಟೆ: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಚಲಾಯಿಸಬೇಕೆಂಬ ಕಾರಣಕ್ಕೆ ಚುನಾವಣಾ ಅಯೋಗವು ಪಿಂಕ್ ಮತಗಟ್ಟೆ ಎಂಬ ಹೆಸರಿನಲ್ಲಿ ಸಖಿ ಮತಗಟ್ಟೆ ನಿರ್ಮಿಸಿತ್ತು. ಮಹಿಳಾ ಮತದಾರರು ಯಾವುದೇ ಅಂಜಿಕೆಯಿಲ್ಲದೇ ಸಖಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲ ಮಾಡಿದ್ದನ್ನು ಮಹಿಳಾ ಮತದಾರರು ಶ್ಲಾಘಿಸಿದರು.

ಮತಯಂತ್ರ ವಿವಿ ಪ್ಯಾಟ್ ತಾಂತ್ರಿಕ ದೋಷ: ಗಾಯತ್ರಿ ನಗರ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮತದಾನ ಮಾಡುವುದು ಮುಕ್ಕಾಲು ಗಂಟೆ ತಡವಾಯಿತು. ಮತಯಂತ್ರ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ಪ್ರಯಾಣಿಕರಿಗೆ ತೊಂದರೆ: ಚುನಾವಣೆ ನಿಮಿತ್ತ ಹೆಚ್ಚಿನ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಬಳಕೆಯಾದ ಕಾರಣ ಮತದಾನ ಮಾಡಲು ಬೇರೆ ಊರುಗಳಲ್ಲಿದ್ದ ಮತದಾರರು ಬಂದು ಹೋಗಲು ಕಷ್ಟಪಡಬೇಕಾಯಿತು. ರೈಲಿನಲ್ಲಿ ಬೆಂಗಳೂರು ಕಡೆಯಿಂದ ಬಂದ ಜನರು ತಮ್ಮ ತಮ್ಮ ಊರುಗಳಿಗೆ ಹೋಗಿ ಮತಚಲಾಯಿಸಲು ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಕಂಡು ಬಂದಿತು. ಆದರೂ ಅನೇಕರು ಬಾಡಿಗೆ ಆಟೋ ಸೇರಿ ಇತರ ವಾಹನಗಳಲ್ಲಿ ತಮ್ಮ ಗ್ರಾಮಗಳನ್ನು ತಲುಪುವಂತಾಯಿತು.

Share this article