ಕುಮಟಾ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮಂಗಳವಾರ ತಾಲೂಕಿನಾದ್ಯಂತ ಶಾಂತಿಯುತವಾಗಿ ಜರುಗಿದ್ದು, ಎಲ್ಲಿಯೂ ಮತದಾನಕ್ಕೆ ವಿಘ್ನಗಳು ಎದುರಾದ ವರದಿಯಿಲ್ಲ.
ಬೆಳಗ್ಗೆಯಿಂದಲೇ ಮತದಾನ ನಿಧಾನಗತಿಯಲ್ಲಿ ನಡೆದು ಮಧ್ಯಾಹ್ನದ ಹೊತ್ತಿಗೆ ತುರುಸು ಪಡೆದುಕೊಂಡಿದೆ. ೩ ಗಂಟೆ ಹೊತ್ತಿಗೆ ಅರ್ಧದಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದು, ಇದಕ್ಕಾಗಿಯೇ ದೂರದ ಶಹರಗಳಿಂದಲೂ ಆಗಮಿಸಿದ್ದರು. ನೆರೆರಾಜ್ಯದಿಂದ ಆಗಮಿಸಿದ್ದ ಸಿದ್ದನಬಾವಿಯ ಮೊದಲ ಬಾರಿಯ ಮತದಾರ ಧ್ಯಾನ ನಾಯಕ ಪ್ರತಿಕ್ರಿಯಿಸಿ, ಮೊದಲ ಬಾರಿ ಮತ ಹಾಕುತ್ತಿದ್ದೇನೆ. ನನ್ನ ಪ್ರಥಮ ಮತದಾನಕ್ಕಾಗಿ ಹೈದರಾಬಾದ್‌ನಿಂದ ಬಂದಿದ್ದೇನೆ. ತುಂಬಾ ಖುಷಿ ಆಯಿತು. ಇಲ್ಲಿ ಎಲ್ಲ ಮತದಾನ ಪ್ರಕ್ರಿಯೆಗಳು ಸುವ್ಯವಸ್ಥಿತವಾಗಿ ಜರುಗಿದೆ. ನಮ್ಮ ಜವಾಬ್ದಾರಿಯನ್ನು ಅರಿತು ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ ಮತ್ತು ಮುಂದಕ್ಕೆ ಸಾಗೋಣ ಎಂದು ಉತ್ಸಾಹದಿಂದ ಹೇಳಿದರು.ಜೋಯಿಡಾದಲ್ಲಿ ಉತ್ಸಾಹದಿಂದ ಮತ ಚಲಾಯಿಸಿದ ಜನ
ಜೋಯಿಡಾ: ತಾಲೂಕಿನಲ್ಲಿ ಲೋಕಸಭಾ ಚುನಾವಣೆಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು. ಮತದಾರರು ಉತ್ಸಾಹದಿಂದ ಬಂದು ಮತದಾನ ನಡೆಸಿರುವುದು ಕಂಡುಬಂದಿತು.ಅಣಶಿಯಿಂದ ಅನಮೋಡ ವರೆಗೂ ಅತ್ಯಂತ ವಿಸ್ತಾರವಾದ ತಾಲೂಕಿನಲ್ಲಿ ಬಜಾರಕುಣಾಂಗ, ಶಿವಪುರಗಳಂತಹ ಹಿಂದುಳಿದ ಪ್ರದೇಶಗಳ ಮತಗಟ್ಟೆಗಳಲ್ಲಿ ಕೂಡ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು ಕಂಡುಬಂದಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಮತದಾರರನ್ನು ಓಲೈಸುವ ಕಾರ್ಯ ಮುಗಿದು, ಮತದಾರರು ಹಕ್ಕು ಚಲಾಯಿಸಿದ್ದಾರೆ, ಮತ ಪೆಟ್ಟಿಗೆಯಲ್ಲಿ ಅವರ ಅಭಿಮತ ಭದ್ರವಾಗಿದೆ. ಉಳಿದ ಅಭ್ಯರ್ಥಿಗಳ ಬಗ್ಗೆ ಮತದಾರರು ಆಸಕ್ತಿ ವಹಿಸಿದ್ದು ಕಂಡುಬಂದಿಲ್ಲ. ತಾಲೂಕಿನಲ್ಲಿ ಸರಿಸುಮಾರು ಶೇ. 70ರಷ್ಟು ಮತದಾನವಾಗಿದೆ ಎಂದು ಮೊದಲ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಕಡೆಗಳಲ್ಲಿ ಮತಗಟ್ಟೆಗಳನ್ನು ಅಲಂಕರಿಸಿದ್ದು ಕಂಡು ಬಂದಿದೆ.ಬಿಜೆಪಿ, ಕಾಂಗ್ರೆಸ್ ಪ್ರಮುಖರೆಲ್ಲ ಮತದಾನ ಕೇಂದ್ರಕ್ಕೆ ಬಂದು ಉತ್ಸಾಹದಿಂದಲೇ ಮತ ಚಲಾಯಿಸಿ ನಮ್ಮದೇ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು.