ಕನ್ನಡಪ್ರಭ ವಾರ್ತೆ ನಂಜನಗೂಡು
ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಒಟ್ಟು 896 ಮತದಾರರ ಪೈಕಿ 568 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 275 ಪುರುಷರು ಹಾಗೂ 293 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಧ್ಯಾಹ್ನದವರೆವಿಗೂ ನಿಧಾನಗತಿಯಲ್ಲಿ ಸಾಗಿದ ಮತದಾನ ನಂತರ ಬಿರುಸುಗೊಂಡಿತು. ವಾರ್ಡಿನ ಹಿರಿಯ ನಾಗರಿಕರು, ಅಂಗವಿಕಲರು ಕೂಡ ಆಸಕ್ತಿಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.ಕಾಂಗ್ರೆಸ್ ಅಭ್ಯರ್ಥಿ ದೊರೆಸ್ವಾಮಿ, ಬಿಜೆಪಿ ಅಭ್ಯರ್ಥಿ ಪಿ. ಮಹೇಶ್ ಅತ್ತಿಖಾನೆ, ಜೆಡಿಎಸ್ ಅಭ್ಯರ್ಥಿ ಸುಬ್ರಹ್ಮಣ್ಯ, ಎಎಪಿ ಅಭ್ಯರ್ಥಿ ಜಯಲಕ್ಷ್ಮಿ ಸ್ಪರ್ಧೆಯ ಕಣದಲ್ಲಿದ್ದು, ಮತದಾನದ ವೇಳೆ ಅಂತಿಮ ಸುತ್ತಿನ ಕಸರತ್ತು ನಡೆಸಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಅಲ್ಲದೆ ಮೂರು ಪಕ್ಷದ ಪ್ರಮುಖ ನಾಯಕರು ಹಾಗೂ ಮುಖಂಡರು ಮತಗಟ್ಟೆ ಸಮೀಪದಲ್ಲಿ ಬೀಡುಬಿಟ್ಟು ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯುವ ಪ್ರಯತ್ನ ಮಾಡಿದರು. ಮತದಾನ ಮುಗಿಯುವರೆಗೂ ಮತಗಟ್ಟೆ ಆವರಣದಲ್ಲೇ ಇದ್ದು ಮತ ಬೇಟೆ ನಡೆಸಿದರು.