ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ 2026ರ ಅಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆಯು ಅತ್ಯಂತ ಶಾಂತಿಯುತವಾಗಿ ಜರುಗಿತು.
ಕನ್ನಡಪ್ರಭ ವಾರ್ತೆ, ಬೀದರ್
ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ 2026ರ ಅಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆಯು ಅತ್ಯಂತ ಶಾಂತಿಯುತವಾಗಿ ಜರುಗಿತು.
ಬೆಳಿಗ್ಗೆ 8 ರಿಂದ ಆರಂಭಗೊಂಡ ಮತದಾನದಲ್ಲಿ, ಜಿಲ್ಲೆಯಾದ್ಯಂತ ಒಟ್ಟಾರೆ ಶೇ. 86.47 ರಷ್ಟು ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,038 ನೋಂದಾಯಿತ ಶಿಕ್ಷಕ ಮತದಾರರಿದ್ದು (3,794 ಪುರುಷರು ಹಾಗೂ 3,244 ಮಹಿಳೆಯರು), ಈ ಪೈಕಿ 3408 ಪುರುಷರು ಹಾಗೂ 2678 ಮಹಿಳೆಯರು ಸೇರಿದಂತೆ ಒಟ್ಟು 6086 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಳಿಗ್ಗೆ 8ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ 10 ರ ಹೊತ್ತಿಗೆ ಶೇ. 12.39ರಷ್ಟು ಮತದಾನವಾಗಿದ್ದರೆ ಮಧ್ಯಾಹ್ನ 12ರ ಒಳಗೆ ಶೇ.39.16ರಷ್ಟು ಆಗಿತ್ತು.
ಮಧ್ಯಾಹ್ನ 2ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಶೇ. 64.09ರಷ್ಟು ಮತದಾನ ದಾಖಲಾಗಿತ್ತು. ಮಧ್ಯಾಹ್ನ 4ಕ್ಕೆ ಇದು ಶೇ. 86.46ರಷ್ಟು ಮತದಾನ ದಾಖಲಾಯಿತು.
ಪುರುಷರ ಮತದಾನದ ಪ್ರಮಾಣ ಶೇ. 89.83 ಹಾಗೂ ಮಹಿಳೆಯರ ಮತದಾನದ ಪ್ರಮಾಣ ಶೇ. 82.55 ಆಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಶೇ. 86.47ರಷ್ಟು ಮತದಾನ ಜರುಗಿದೆ.
ಠಾಣಾಕುಶನೂರ, ಮನ್ನಾಎಖ್ಖೆಳ್ಳಿಯಲ್ಲಿ ಶತಪ್ರತಿಶತ ಮತ:
ಕಮಲನಗರದ ಠಾಣಾಕುಶನೂರನ ಮತದಾನ ಕೇಂದ್ರ ಭಾಗ ಸಂಖ್ಯೆ 32ರ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಒಟ್ಟು 77 ಮತದಾರರ ಪೈಕಿ ಎಲ್ಲರೂ ಮತದಾನ ಮಾಡಿದ್ದು ಶೇ. 100ರಷ್ಟು ಮತದಾನ ದಾಖಲಾಗಿದೆ. ಹಾಗೆಯೇ ಚಿಟಗುಪ್ಪಾ ತಾಲೂಕಿನ ಮನ್ನಾಎಖ್ಖೆಳ್ಳಿಯ ಮತದಾನ ಕೇಂದ್ರದ ಭಾಗ ಸಂಖ್ಯೆ 59ರ ಗ್ರಾಪಂ ಕಟ್ಟಡದ ಮತಗಟ್ಟೆಯಲ್ಲಿ 28 ಮತದಾರರ ಪೈಕಿ ಎಲ್ಲರೂ ಮತದಾನ ಮಾಡಿ ಶತಪ್ರತಿಶತ ಮತದಾನ ದಾಖಲಿಸಿದ್ದಾರೆ.
ಬಿಗಿ ಪೊಲೀಸ್ ಭದ್ರತೆ:
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದ್ದು, ಮತದಾನವು ಸುಸೂತ್ರವಾಗಿ ನಡೆಯಿತು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಬೀದರ್ ಸಹಾಯಕ ಆಯುಕ್ತ ಅಭಿನವ್ ಜೈನ್ ಅವರು ಬೀದರ್ ನಗರ, ಹಳ್ಳಿಖೇಡ, ಹುಮನಾಬಾದ್, ರಾಜೇಶ್ವರ ಹಾಗೂ ದುಬಲಗುಂಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರೂ ಸಹ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುವ ನಿಟ್ಟಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.