ಜಗಳೂರಲ್ಲಿ ಶಾಂತಿಯುತ ಮತದಾನ

KannadaprabhaNewsNetwork | Published : May 8, 2024 1:01 AM

ಸಾರಾಂಶ

ದಾವಣಗೆರೆ ಲೋಕಸಭಾ ಚುನಾವಣೆ ಮಂಗಳವಾಗ ನಡೆದಿದ್ದು, ಜಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಶಾಂತಿಯುತ ಮತದಾನ ನಡೆಯಿತು. ಶಾಸಕ ಬಿ.ದೇವೇಂದ್ರಪ್ಪ ತಮ್ಮ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಮತ್ತು ಮಾಜಿ ಶಾಸಕ ಎಚ್.ಪಿ. ರಾಜೇಶ್ ಬಿದರಕೆರೆ ಗ್ರಾಮದ ಸರಕಾರಿ ಶಾಲೆಗಳಲ್ಲಿ ಮತದಾನ ಮಾಡಿದ್ದಾರೆ.

- ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕ ಎಚ್‌.ಪಿ.ರಾಜೇಶ್ ಓಟ್‌ - - - ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆ ಮಂಗಳವಾರ ನಡೆದಿದ್ದು, ಜಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಶಾಂತಿಯುತ ಮತದಾನ ನಡೆಯಿತು. ಶಾಸಕ ಬಿ.ದೇವೇಂದ್ರಪ್ಪ ತಮ್ಮ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಮತ್ತು ಮಾಜಿ ಶಾಸಕ ಎಚ್.ಪಿ. ರಾಜೇಶ್ ಬಿದರಕೆರೆ ಗ್ರಾಮದ ಸರಕಾರಿ ಶಾಲೆಗಳಲ್ಲಿ ಮತದಾನ ಮಾಡಿದರು.

ಸಂಜೆ 5 ಗಂಟೆಗೆ ಶೇ.73ರಷ್ಟು ಮತದಾನವಾಗಿದೆ. ಸಂಜೆ ಆರು ಗಂಟೆ ವೇಳೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಿರೀಕ್ಷೆಯಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಿದ್ರಾಮ ವೈ.ಎಂ. ಮಾರಿಹಾಳ್ ಮಾಹಿತಿ ನೀಡಿದರು.

ಜಗಳೂರು ಕ್ಷೇತ್ರದ ಒಟ್ಟು 263 ಚುನಾವಣಾ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಆರಂಭಿಕ ಹಂತದಲ್ಲಿ ಮತಗಟ್ಟೆ ಸಂಖ್ಯೆ 15, 112, 173 ಮತ್ತು 195ರಲ್ಲಿ ವಿ.ವಿ. ಪ್ಯಾಟ್ ಯಂತ್ರದಲ್ಲಿ ಮತ್ತು ಮತಗಟ್ಟೆ ಸಂಖ್ಯೆ 75ರಲ್ಲಿ ಮಧ್ಯಾಹ್ನದ ವೇಳೆಗೆ ವಿ.ವಿ. ಪ್ಯಾಟ್‌ನಲ್ಲಿ ದೋಷ ಕಂಡುಬಂದಿತು. ಆದ್ದರಿಂದ ಅವುಗಳನ್ನು ಬದಲಾಯಿಸಲಾಯಿತು. 1 ಸಿಯು ಯಂತ್ರದಲ್ಲಿ (ಕಂಟ್ರೋಲ್ ಯುನಿಟ್)ನಲ್ಲಿ ದೋಷ ಉಂಟಾಗಿದ್ದರಿಂದ ಅದನ್ನು ತ್ವರಿತವಾಗಿ ಬದಲಾವಣೆ ಮಾಡಿ ಸರಿಪಡಿಸುವ ಮೂಲಕ ಕ್ಷಿಪ್ರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ತಿಳಿಸಿದರು.

ಬಿಸಿಲಿಗೆ ಬಸವಳಿದರು:

7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದರೂ ಅಷ್ಟಾಗಿ ಜನ ಮತಗಟ್ಟೆಗಳಿಗೆ ಬರಲಿಲ್ಲ. ಆದರೆ, 9 ಗಂಟೆ ಆಗುತ್ತಿದ್ದಂತೆ ಮತಗಟ್ಟೆಗಳಿಗೆ ಧಾವಿಸಿದ ಜನರು, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಆದರೆ, ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಮತದಾರರು ಅಷ್ಟಾಗಿ ಮತಗಟ್ಟೆಗಳಿಗೆ ಬರಲಿಲ್ಲ. ಕಾರಣ ವಿಪರೀತ ಬಿಸಿಲು ಇದ್ದುದರಿಂದ ಸಂಜೆ 4 ಗಂಟೆ ವೇಳೆಗೆ ಮತದಾನ ಕೇಂದ್ರಗಳಿಗೆ ಬಂದು ಮತದಾನ ಮಾಡಿದ ದೃಶ್ಯ ಕ್ಷೇತ್ರದಾದ್ಯಂತ ಕಂಡುಬಂತು.

- - - -7ಜೆಎಲ್ಆರ್‌ಚಿತ್ರ1:

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಮತದಾರರು.

Share this article