ದೇವನಹಳ್ಳಿ: ಇಲ್ಲಿನ ಪ್ರಸಿದ್ಧ ಪಾರಿವಾಳ ಗುಟ್ಟದಲ್ಲಿ ಸಿದ್ದಾಚಲ ಸ್ಥೂಲಧಾಮಕ್ಕೆ ಸರ್ಕಾರ ಜಾಗ ಮಂಜೂರು ಮಾಡಿದೆ. ದೇವಾಲಯಕ್ಕೆ ತೆರಳಲು ರಸ್ತೆಗೆ ಜಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆಯೇ ಹೊರತು ನಾವು ಕಡಲೆಕಾಯಿ ಪರಿಷೆ ನಡೆಯುವ ಜಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿಲ್ಲ ಎಂದು ಶ್ರೀ ಸಿದ್ದಾಚಲ ಸ್ಥೂಲಭದ್ರ ಧಾಮದ ಸ್ಥಾಪಕ ಆಚಾರ್ಯ ಚಂದ್ರ ಯಶ್ ಸೂರೀಶ್ವರ್‌ಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರಿವಾಳ ಗುಟ್ಟದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಸರ್ವೆ ನಂ-3ರಲ್ಲಿದೆ. ಕಡಲೆಕಾಯಿ ಪರಿಷೆ ಸರ್ವೆ ನಂ-3,2 ಮತ್ತು 122ರಲ್ಲಿ ನಡೆಯುತ್ತದೆ. ಈ ಜಾಗ ನಮ್ಮದು ನಮಗೆ ಬೇಕು ಎಂದು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಇದೆಲ್ಲ ಸತ್ಯಕ್ಕೆ ದೂರ. ನಮ್ಮ ಬಗ್ಗೆ ಸುಖಾಸುಮ್ಮಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.ನಮ್ಮ ಸಂಸ್ಥೆಯಿಂದ ಹನುಮಾನ್ ದೇವಾಲಯ ಪುನಶ್ಚೇತನಕ್ಕಾಗಿ 25 ಲಕ್ಷ ನೀಡಲಿದ್ದೇವೆ. ನಾವು ಸರ್ವೆ ನಂ-9 ಮತ್ತು 4 ಜಾಗವನ್ನು ನಾವು ಕೇಳಿದ್ದೇವೆ. ಇದು ಕಡಲೆಕಾಯಿ ಪರಿಷೆ ನಡೆಯುವ ಜಾಗವಲ್ಲ. ಈ ಜಾಗ ಜೈನ ತೀರ್ಥದ ಮುಂದೆ ಇರುವ ಬಂಜರುಭೂಮಿ ಇಲ್ಲಿ ರಸ್ತೆ ನಿರ್ಮಾಣ ಮತ್ತು ಮಳೆ ನೀರು ಸಂಗ್ರಹಿಸಲು ನಾವು ಭೂಮಿ ಕೇಳಿದ್ದೇವೆ. ಆದರೆ ಕೆಲವರ ಸುಳ್ಳು ಪ್ರಚಾರದಿಂದ ಅಡೆತಡೆ ಉಂಟಾಗುತ್ತಿದೆ. ಈ ಭೂಮಿ ತೀರ್ಥ ಧಾಮಕ್ಕೆ ಕಾಲು ನಡಿಗೆ ಜಾಗವಾಗಿದ್ದು, ಆ ಜಾಗದಲ್ಲಿ ಬರುವುದಕ್ಕೆ ಅಡ್ಡಿಪಡಿಸಿದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ. ಶಾಲೆ ಮತ್ತು ಆಸ್ಪತ್ರೆ ಉದ್ಘಾಟನೆ ದಿನವೇ ಕೆಲವರು ದಾರಿ ತಡೆದು ಕಾರ್ಯಕ್ರಮಕ್ಕೆ ಅಡಚಣೆ ಮಾಡಿದರು. ಪಾರಿವಾಳಗುಟ್ಟದಲ್ಲಿರುವ ಗುಹಾ ದೇವಾಲಯದ ವಿಚಾರ ನ್ಯಾಯಾಲಯದಲ್ಲಿದೆ. ಪೂಜೆ ಮಾಡಲು ಬಿಡುತ್ತಿಲ್ಲವೆನ್ನುವುದು ಸುಳ್ಳು, ಅನಧಿಕೃತ ಚಟುವಟಿಕೆ ತಪ್ಪಿಸಲು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ನಾವು ಗ್ರಾಮಸ್ಥರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ, ದೇವಾಲಯಕ್ಕೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.ಇದೇ ವೇಳೆ ಶ್ರೀ ಸಿದ್ದಾಚಲ ಸ್ಥೂಲಭದ್ರಧಾಮದ ಟ್ರಸ್ಟ್‌ನ ಪದಾಧಿಕಾರಿಗಳಾದ ಅಶೋಕ್‌ಕುಮಾರ್, ರಮೇಶ್‌ಲಾಲ್ ಸಂಗ್ವಿ, ಭಾಗ್ಯಷಾ, ಅಬಿನಂದನ್ ಜೈನ್, ನಂಜೇಗೌಡ ಇತರರಿದ್ದರು.
೨೮ ದೇವನಹಳ್ಳಿ ಚಿತ್ರಸುದ್ದಿ: ೦೨ಶ್ರೀ ಸಿದ್ಧಾಚಲ ಸ್ಥೂಲಭದ್ರ ಧಾಮದ ಸ್ಥಾಪಕ ಆಚಾರ್ಯ ಚಂದ್ರ ಯಶ್ ಸೂರೀಶ್ವರ್‌ಜೀ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.