ಹೂವಿನಹಡಗಲಿ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತವರೆಗಿನ ಪಾದಚಾರಿ ರಸ್ತೆಯನ್ನು ಪುರಸಭೆ ಮೊದಲ ಹಂತದ ತೆರವು ಕಾರ್ಯ ಆರಂಭಿಸಿದೆ.
ಪಾದಚಾರಿ ಮಾರ್ಗವನ್ನು ರಸ್ತೆ ಇಕ್ಕೆಲಗಳಲ್ಲಿ ಅತಿಕ್ರಮಿಸಿದ್ದ ಹೂವು, ಹಣ್ಣು ವ್ಯಾಪಾರಿಗಳ ಪುಟ್ಟಿ, ಪಾಸ್ಟ್ ಫುಡ್ ಸೆಂಟರ್‌ಗಳು, ಪರಿಕರ, ಪಾದಚಾರಿ ರಸ್ತೆಯಲ್ಲಿ ಅಳವಡಿಸಿದ್ದ ಫಲಕಗಳನ್ನು ಪುರಸಭೆ ಸಿಬ್ಬಂದಿ ಕಿತ್ತು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ದರು.
ಈ ವೇಳೆ ಕರ್ನಾಟಕ ರಾಷ್ಟ್ರ ಸಮಿತಿಯ ಡಿ.ಚಂದ್ರಶೇಖರ ಹಾಗೂ ಕೆಲ ಫುಟ್ ಪಾತ್ ವ್ಯಾಪಾರಿಗಳು ತೆರವು ಕಾರ್ಯಾಚರಣೆಗೆ ಆಕ್ಷೇಪಿಸಿದರು. ಅದನ್ನು ಲೆಕ್ಕಿಸದೇ ಎರಡುವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಲಾಯಿತು.ಕಳೆದ ತಿಂಗಳು ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಫುಟ್ ಪಾತ್ ಒತ್ತುವರಿ ಸಮಸ್ಯೆಯನ್ನು ವೀಕ್ಷಿಸಿ, ತೆರವಿಗೆ ನಿರ್ದೇಶನ ನೀಡಿದ್ದರು. ತಹಸೀಲ್ದಾರರು ನಿಯಮಾನುಸಾರ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿ, ಪರ್ಯಾಯ ಜಾಗಗಳಿಗೆ ಸ್ಥಳಾಂತರಗೊಳ್ಳಲು 10 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದಾಗ್ಯೂ ಬೀದಿಬದಿ ವ್ಯಾಪಾರಿಗಳು ಒತ್ತುವರಿ ತೆರವಿಗೊಳಿಸದೇ ಇದ್ದುದರಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಮುಖ್ಯಾಧಿಕಾರಿ ಎಚ್.ಇಮಾಮಸಾಹೇಬ್ ತಿಳಿಸಿದರು.
ಮೊದಲ ಹಂತದಲ್ಲಿ ಹರಪನಹಳ್ಳಿ ಮುಖ್ಯ ರಸ್ತೆಯ ಒತ್ತುವರಿ ತೆರವುಗೊಳಿಸಿದ್ದೇವೆ. ಮುಂದಿನ ವಾರ ಶಾಸ್ತ್ರಿ ವೃತ್ತದಿಂದ ಕಲ್ಲೇಶ್ವರ ದೇವಸ್ಥಾನವರೆಗೆ ಹಾಗೂ ಮೂರನೇ ಹಂತದಲ್ಲಿ ಶಾಸ್ತ್ರಿ ವೃತ್ತದಿಂದ ಬಸ್ ನಿಲ್ದಾಣವರೆಗೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದೇವೆ. ಪಟ್ಟಣದಲ್ಲಿ ವಾಹನ ದಟ್ಟಣೆ ಸಮಸ್ಯೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಫುಟ್ ಪಾತ್ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಅವರು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು.