ಗದಗ:
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. 42 ಎಸಿಎಂಎಂ ಹಾಗೂ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಜಡ್ಜ್ 81 (82) ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಗಾಗಿ ದೂರುದಾರರು, ಸಂತ್ರಸ್ತೆಯರು ಆಗಮಿಸುವುದು ಸಾಮಾನ್ಯ. ಆದರೆ ಪ್ರಸ್ತುತ ನಡೆಯುತ್ತಿರುವ ನ್ಯಾಯಾಲಯ ಆವರಣದಲ್ಲಿ ಬೇರೆ ಬೇರೆ ನ್ಯಾಯಾಲಯಗಳಿರುವ ಹಿನ್ನೆಲೆಯಲ್ಲಿ ಸಾಕ್ಷಿದಾರರಿಗೆ ರಕ್ಷಣೆ ಒದಗಿಸುವುದು ಮತ್ತು ಅವರ ಗೌಪ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗಳ ಪ್ರಕರಣ ವಿಚಾರಣೆಗಳ ದಿನಗಳಂದು ಮಾತ್ರ ಈ ನ್ಯಾಯಾಲಯಗಳನ್ನು ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಪ್ರಾರಂಭಿಸಲಾಗಿದ್ದ ಗುರುನಾನಕ್ ಭವನದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಬಗ್ಗೆ ನಮ್ಮ ಇಲಾಖೆ ಅನುಮೋದನೆ ನೀಡಿದೆ.
ಈ ಎರಡೂ ನ್ಯಾಯಾಲಯಗಳು ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರೋಪಿಗಳ ಪರ ಬಾತ್ಮೀದಾರರು, ಮಾಧ್ಯಮದವರು ಹಾಗೂ ಸಾರ್ವಜನಿಕರು ಸಹ ನ್ಯಾಯಾಲಯಗಳಲ್ಲಿ ನಿರಾತಂಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಪೆನ್‌ಡ್ರೈವ್ ಪ್ರಕರಣಗಳ ವಿಚಾರಣೆ ಸಮಯದೊಳಗೆ ಗೌಪ್ಯತೆ ಕಾಪಾಡಲು ಕಷ್ಟವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಹಾಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.ಸ್ಯಾಂ ಪಿತ್ರೋಡಾ ಅವರ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣವೇ ದೇಶದ ಜನರ ಕ್ಷಮೆ ಕೇಳಬೇಕು, ಭಾರತದ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಸುಧಾರಿತರು, ಸುಸಂಸ್ಕೃತರು ಎನಿಸಿಕೊಂಡ ಬುದ್ಧಿಜೀವಿಗಳು ಕೆಲವೊಮ್ಮೆ ಬಣ್ಣದ ಮೇಲೆ ಜನಾಂಗ ಪ್ರತ್ಯೇಕಿಸುವುದನ್ನು ಯಾರೂ ಸಹಿಸುವುದಿಲ್ಲ. ಹೋಲಿಕೆ ಮಾಡುವ ಜತೆಗೆ ಆಫ್ರಿಕನ್‌ರನ್ನು ನೋಡುವ ಅವರ ಮನಸ್ಥಿತಿ ಕೂಡಾ ತಪ್ಪಿದೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ದೇಶದ ಜನರ ಕ್ಷಮೆ ಕೇಳಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಎಸ್.ಎನ್. ಬಳ್ಳಾರಿ, ಗುರಣ್ಣ ಬಳಗಾನೂರ, ವಾಸಪ್ಪ ಕುರುಡಗಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ಉಮರ್ ಫಾರೂಕ್ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು. ಗದಗ ಜಿಲ್ಲೆಯಲ್ಲಿ ಅತ್ಯಂತ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದಕ್ಕೆ ಸಹಕರಿಸಿ ಜಿಲ್ಲೆಯ ಜನತೆಗೂ, ಶ್ರಮಿಸಿದ ಅಧಿಕಾರಿಗಳಿಗೂ ಅಭಿನಂದನೆಗಳು, ಕಳೆದ ಬಾರಿಗಿಂತಲೂ ಮತದಾನದಲ್ಲಿಯೂ ಹೆಚ್ಚಳವಾಗಿದ್ದು, ಸಂತೋಷದ ಸಂಗತಿ. ಜನರು ಮತದಾನ ಬಗ್ಗೆ ಹೆಚ್ಚಿನ ಅರಿವು ಹೊಂದುತ್ತಿದ್ದಾರೆ ಎನ್ನುವುದಕ್ಕೆ ಲೋಕಸಭಾ ಚುನಾವಣೆಯ ಮತದಾನವೇ ಸಾಕ್ಷಿಯಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.