ಕೃಷ್ಣ ಎನ್. ಲಮಾಣಿ
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಓವರ್‌ಲೋಡ್ ಸರಕು ಹೇರಿಕೊಂಡು ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಜಿಲ್ಲೆಯ ಏಳು ವಾಹನಗಳ ಚಾಲಕರ ಡ್ರೈವಿಂಗ್ ಲೈಸೆನ್ಸ್, ವಾಹನಗಳ ನೋಂದಣಿ ಕೂಡ ಅಮಾನತಿನಲ್ಲಿಡಲಾಗಿದೆ. ಒಂದರಿಂದ ಮೂರು ತಿಂಗಳವರೆಗೆ ಅಮಾನತಿನಲ್ಲಿಡುವ ಶಿಕ್ಷೆ ಇದೆ. ಓವರ್ ಲೋಡ್ ವಾಹನ ತಪಾಸಣೆಗೆ ಆರ್‌ಟಿಒ ಇನ್‌ಸ್ಪೆಕ್ಟರ್‌ಗಳಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಲಾಗಿದೆ.
ವಾಹನಗಳಿಗೆ ದಂಡ:ಜಿಲ್ಲೆಯಲ್ಲಿ ಆ.26ರಿಂದ ಸೆ.21ರ ವರೆಗೆ ಓವರ್‌ಲೋಡ್ ಸರಕು ಸಾಗಾಟ ಮಾಡುತ್ತಿದ್ದ 24 ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ₹8.28 ಲಕ್ಷ ದಂಡ ವಿಧಿಸಿದ್ದಾರೆ. ಇದರಲ್ಲಿ ಏಳು ವಾಹನಗಳು ವಿಜಯನಗರ ಆರ್‌ಟಿಒ ಕಚೇರಿ ವ್ಯಾಪ್ತಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಚಾಲಕರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಕೂಡ ಒಂದರಿಂದ ಮೂರು ತಿಂಗಳವರೆಗೆ ಅಮಾನತಿನಲ್ಲಿಟ್ಟು ಎಚ್ಚರಿಸಿದ್ದಾರೆ.
ಗೋವಾ, ಕೇರಳ, ತಮಿಳುನಾಡು, ಕೊಪ್ಪಳ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ, ಕಲಬುರಗಿ ಆರ್‌ಟಿಒ ಅಧಿಕಾರಿಗಳಿಗೆ ವಿಜಯನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚವ್ಹಾಣ್, ಓವರ್ ಲೋಡ್ ಸರಕು ಸಾಗಾಟದೊಂದಿಗೆ ಜಿಲ್ಲೆ ಪ್ರವೇಶ ಮಾಡಿದ್ದ ವಾಹನಗಳ ಚಾಲಕರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನಗಳ ನೋಂದಣಿ ಅಮಾನತಿನಲ್ಲಿಡಲು ಪತ್ರ ಬರೆದಿದ್ದಾರೆ.
ನಿಯಮ ಏನು ಹೇಳುತ್ತದೆ:
ಜಿಲ್ಲೆಯಲ್ಲಿ ಓವರ್‌ಲೋಡ್ ಮಾಡಿಕೊಂಡು ಬರುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರನ್ವಯ ಕ್ರಮ ವಹಿಸಲಾಗಿದೆ. ಈಗಾಗಲೇ ಸಂಬಂಧಿಸಿದ ಆರ್‌ಟಿಒಗಳಿಗೂ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಅಮಾನತಿನಲ್ಲಿಡಲು ಪತ್ರ ಬರೆಯಲಾಗಿದೆ ಎನ್ನುತ್ತಾರೆ ಆರ್‌ಟಿಒ ವಸಂತ್ ಚವ್ಹಾಣ್.