ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನರಿಗೆ ಪಿಂಚಣಿ ಕಟ್‌!

KannadaprabhaNewsNetwork |  
Published : Jul 23, 2026, 02:00 AM ISTUpdated : Jul 23, 2026, 08:39 AM IST
Pension

ಸಾರಾಂಶ

ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಪಾವತಿಯಾಗುತ್ತಿದ್ದ ಪಿಂಚಣಿ ಸ್ಥಗಿತಗೊಳಿಸಿದ್ದು, ಯಾವ ಕಾರಣಕ್ಕಾಗಿ ಹಣ ಪಾವತಿಯಾಗುತ್ತಿಲ್ಲ ಎಂದು ನಿರ್ದಿಷ್ಟವಾಗಿ ತಿಳಿಯದೆ ಜನ ಪರದಾಡುತ್ತಿದ್ದಾರೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಪಾವತಿಯಾಗುತ್ತಿದ್ದ ಪಿಂಚಣಿ ಸ್ಥಗಿತಗೊಳಿಸಿದ್ದು, ಯಾವ ಕಾರಣಕ್ಕಾಗಿ ಹಣ ಪಾವತಿಯಾಗುತ್ತಿಲ್ಲ ಎಂದು ನಿರ್ದಿಷ್ಟವಾಗಿ ತಿಳಿಯದೆ ಜನ ಪರದಾಡುತ್ತಿದ್ದಾರೆ.

ಪಿಂಚಣಿ ಸ್ಥಗಿತದ ಬಗ್ಗೆ ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ಮೆಸೇಜ್‌ ಕಳುಹಿಸಿದ್ದರೂ ಬಹಳಷ್ಟು ಜನರಿಗೆ ಇದರ ಅರಿವೇ ಇಲ್ಲ. ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು(ವಿಎ) ಪಿಂಚಣಿ ಸ್ಥಗಿತವಾಗಿರುವ ಪ್ರತಿ ಫಲಾನುಭವಿಗೂ ನೋಟಿಸ್‌(ತಿಳಿವಳಿಕೆ) ನೀಡಿ ಸೂಕ್ತ ದಾಖಲೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಬೇಕು. ವಿಪರ್ಯಾಸವೆಂದರೆ ಫಲಾನುಭವಿಗೆ ಯಾವ ನಿರ್ದಿಷ್ಟ ಕಾರಣಕ್ಕಾಗಿ ಪಿಂಚಣಿ ಸ್ಥಗಿತವಾಗಿದೆ ಎಂಬ ಸಮಗ್ರ ಮಾಹಿತಿಯೇ ವಿಎಗಳ ಬಳಿ ಇಲ್ಲ.

ಮತ್ತೊಂದೆಡೆ, ಹೋಬಳಿ ಮಟ್ಟದಲ್ಲಿರುವ ನಾಡ ಕಚೇರಿಗಳಲ್ಲೂ ಈ ಬಗ್ಗೆ ಪರಿಶೀಲನೆ ನಡೆಸುವ ಅವಕಾಶ ಇಲ್ಲದಂತಾಗಿದೆ. ಇದರಿಂದಾಗಿ ಫಲಾನುಭವಿಗಳು ದೂರದ ತಾಲೂಕು ಕೇಂದ್ರಕ್ಕೆ ತೆರಳಿ ತಾಲೂಕು ಕಚೇರಿಗಳಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಪಂಚಾಯ್ತಿವಾರು ಸಂದೇಹಾಸ್ಪದ ಪ್ರಕರಣಗಳ ಬಗ್ಗೆ ವಿಎಗಳಿಗೆ ಪಟ್ಟಿ ನೀಡಲಾಗಿದೆ. ಆದರೆ, ಇಂತಹ ನಿರ್ದಿಷ್ಟ ಕಾರಣಕ್ಕಾಗಿಯೇ ಪಿಂಚಣಿ ಸ್ಥಗಿತವಾಗಿದೆ ಎಂಬ ಮಾಹಿತಿ ನೀಡಿಲ್ಲ.

ದಾಖಲೆ ಸಲ್ಲಿಕೆಯ ಗೊಂದಲ:

ಕೆಲ ಗ್ರಾಮ ಆಡಳಿತಾಧಿಕಾರಿಗಳು ‘ಆದಾಯ ದೃಢೀಕರಣ, ಪಡಿತರ ಚೀಟಿ, ಆಧಾರ್‌ ಮತ್ತಿತರ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಮುಗುಮ್ಮಾಗಿ ಹೇಳುತ್ತಿದ್ದಾರೆ. ಮತ್ತೆ ಕೆಲವೆಡೆ, ಫಲಾನುಭವಿಗಳೇ ತಾಲೂಕು ಕಚೇರಿಗಳಿಗೆ ತೆರಳಿ, ಯಾವ ಕಾರಣಕ್ಕಾಗಿ ಪಿಂಚಣಿ ಸ್ಥಗಿತವಾಗಿದೆ ಎಂಬುದನ್ನು ಪರಿಶೀಲನೆ ಮಾಡಿಸಿಕೊಂಡು ಬಂದು ಗ್ರಾಮ ಆಡಳಿತಾಧಿಕಾರಿಗಳಿಗೆ ತಿಳಿಸಿದಾಗ ಅದರಂತೆ ನೋಟಿಸ್‌ ನೀಡಲಾಗುತ್ತಿದೆ.

ರಾಜ್ಯದಲ್ಲಿ 83 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಈ ಹಿಂದೆ ಸಂಧ್ಯಾ ಸುರಕ್ಷಾ, ವಿಧವಾ, ವಿಕಲಚೇತನ ಸೇರಿ ಒಂಬತ್ತು ವಿಧದ ಪಿಂಚಣಿ ಪಡೆಯುತ್ತಿದ್ದರು. ಮೂರು ತಿಂಗಳ ಹಿಂದೆ ಇವುಗಳನ್ನೆಲ್ಲ ಪರಿಶೀಲಿಸಿ ಸಂದೇಹಾಸ್ಪದವಾದ 23,14,188 ಪಿಂಚಣಿದಾರರ ಹಣ ಪಾವತಿ ನಿಲ್ಲಿಸಲಾಗಿದೆ. ಇದರಲ್ಲಿ 4,24,158 ಜನ ಸೂಕ್ತ ದಾಖಲೆ ನೀಡಿದ್ದರಿಂದ ಬಾಕಿ ಇದ್ದ ಪಿಂಚಣಿ ಪಾವತಿಯಾಗಿದೆ. ಇನ್ನುಳಿದ 18,97,596 ಪಿಂಚಣಿಗೆ ಬ್ರೇಕ್‌ ಹಾಕಲಾಗಿದೆ. ಇನ್ನೂ 82,434 ಪ್ರಕರಣಗಳ ಪರಿಶೀಲನೆ ಬಾಕಿ ಇದೆ. ಜುಲೈ ತಿಂಗಳಿನಲ್ಲಿ ಒಟ್ಟಾರೆ 62,59,121 ಫಲಾನುಭವಿಗಳಿಗೆ 664.25 ಕೋಟಿ ರು. ಪಿಂಚಣಿ ಪಾವತಿಸಲಾಗಿದೆ.

7 ಲಕ್ಷಕ್ಕೂ ಅಧಿಕ ನೋಟಿಸ್‌ ನೀಡದೆ ‘ವಿಎ’ಗಳಿಂದ ವಿಳಂಬ

ಫಲಾನುಭವಿಯು ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದು, ಅದನ್ನು ತಡೆ ಹಿಡಿದಿದ್ದರೆ ಯಾವ ಕಾರಣಕ್ಕಾಗಿ ಹಣ ಪಾವತಿಯಾಗುತ್ತಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿಗಳು (ವಿಎ) ಫಲಾನುಭವಿಗೆ ನೋಟಿಸ್‌ ನೀಡಬೇಕು. ಆದರೆ ವಿಎಗಳು ನೋಟಿಸ್‌ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಮೂಲಗಳ ಪ್ರಕಾರ ಜು.13 ರವರೆಗೂ ರಾಜ್ಯದಲ್ಲಿ 15,02,999 ಫಲಾನುಭವಿಗಳಿಗೆ ತಿಳಿವಳಿಕೆ ಪತ್ರ ನೀಡಿ ಎಂದು ಸೂಚಿಸಲಾಗಿದೆ. ಆದರೆ ಇದರಲ್ಲಿ ಅರ್ಧಕ್ಕಿಂತಲೂ ಅಧಿಕ ಜನರಿಗೆ ತಿಳಿವಳಿಕೆ ಪತ್ರವನ್ನೇ ನೀಡಿಲ್ಲ.

ಎಸ್‌ಐಆರ್‌ ಕೆಲಸದಿಂದ ಹಿನ್ನಡೆ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕಾರ್ಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತೊಡಗಿರುವುದರಿಂದ ಪಿಂಚಣಿ ಸ್ಥಗಿತದ ಬಗ್ಗೆ ಫಲಾನುಭವಿಗಳಿಗೆ ನೋಟಿಸ್‌ ನೀಡಲು ಹಿನ್ನಡೆ ಉಂಟಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಟೋಕನ್ ವ್ಯವಸ್ಥೆಯಿಂದ ಪ್ರವಾಸೋದ್ಯಮ ನೆಚ್ಚಿಕೊಂಡವರಿಗೆ ಸಮಸ್ಯೆ
ಧರ್ಮಶಾಸ್ತ್ರದಲ್ಲೂ ಶುದ್ಧ ನೀರಿಗೆ ಒತ್ತು: ರಾಘವೇಶ್ವರ ಶ್ರೀ