ಕಾಪು: ಇಲ್ಲಿನ ಮಣಿಪುರ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ, ತಾಲೂಕು ಆಡಳಿತ ವತಿಯಿಂದ ನಡೆದ ಉಡುಪಿ ತಾಲೂಕು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 47 ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಅವುಗಳನ್ನು ವಿಲೇಗೊಳಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು, ಪ್ರಜಾಸೇವಾ ಸಭೆಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನಗಳು ಬರುತ್ತಿಲ್ಲ ಎಂಬ ದೂರುಗಳು ಹೆಚ್ಚು ಬರುತ್ತಿದೆ, ಈ ಯೋಜನೆಗಳಲ್ಲಿರುವ ಅನರ್ಹರನ್ನು ಪತ್ತೆ ಮಾಡಿ ಅವರನ್ನು ಕೈಬಿಡುವುದಕ್ಕಾಗಿ ಫಲಾನುಭವಿಗಳ ದಾಖಲೆಗಳ ಪರಿಶೀಲನೆ - ಸರ್ವೇ ನಡೆಯುತ್ತಿವೆ, ಅರ್ಹರಿಗೆ ಮಾತ್ರ ಮುಂದಿನ 15 ದಿನಗಳ ಒಳಗಾಗಿ ಪಿಂಚಣಿ ಸೌಲಭ್ಯಗಳು ದೊರೆಯಲಿದ್ದು, ಯಾರೂ ಆತಂಕ ಪಡಬೇಕಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಮೇವಿನ ಬೀಜದ ಕಿಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಸಹಾಯಕ ಕಮಿಷನರ್ ಮಹೇಶ್ ಪಿ.ಎಸ್., ಜಿಪಂ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭುದೆ, ಉಡುಪಿ ತಹಸೀಲ್ದಾರ್ ಗುರುರಾಜ್, ಇಓ ವಿಜಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.