ಮನೆ ಸಾಲಕ್ಕೆ ಶೇ.21 ಬಡ್ಡಿ: ಫೈನಾನ್ಸ್ ವಿರುದ್ಧ ರೈತ ಸಂಘ ಪ್ರತಿಭಟನೆ

KannadaprabhaNewsNetwork |  
Published : May 26, 2026, 03:15 AM IST
17 | Kannada Prabha

ಸಾರಾಂಶ

ಸಾಲ ಪಡೆದು ಸುಮಾರು 4 ವರ್ಷಗಳಾಗಿವೆ. ಈಗಾಗಲೇ ಸಿದ್ದರಾಜು 10.5 ಲಕ್ಷ ರೂ. ಫೈನಾನ್ಸ್‌ ಗೆ ಪಾವತಿಸಿದ್ದಾರೆ. ಆದರೆ, ಇನ್ನೂ 14.5 ಲಕ್ಷ ರೂ. ಕಟ್ಟಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಬ್ಯಾಂಕಿನ ಸಿಬ್ಬಂದಿ,

ಕನ್ನಡಪ್ರಭ ವಾರ್ತೆ ಮೈಸೂರು

ಮನೆ ಸಾಲಕ್ಕೆ ಶೇ.21 ರಷ್ಟು ಬಡ್ಡಿ ವಿಧಿಸಿದ ಜನ ಸ್ಮಾಲ್ ಫೈನಾನ್ಸ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದವರು ಸೋಮವಾರ ಪ್ರತಿಭಟಿಸಿದರು.ನಗರದ ಕಾಳಿದಾಸ ರಸ್ತೆಯ ಸಿಗ್ನಲ್ ಜಂಕ್ಷನ್ ಬಳಿ ಇರುವ ಜನ ಸ್ಮಾಲ್ ಫೈನಾನ್ಸ್ ಕಚೇರಿ ಎದುರು ಪ್ರತಿಭಟಿಸಿದ ರೈತ ಸಂಘದವರು, ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಮೈಸೂರು ತಾಲೂಕು ಹಳೇರಾಮನಹಳ್ಳಿಯ ರೈತ ಸಿದ್ದರಾಜು ಎಂಬುವರು 5 ವರ್ಷದ ಹಿಂದೆ ಜನ ಸ್ಮಾಲ್ ಫೈನಾನ್ಸ್‌ ಸೇಲ್ಸ್ ವಿಭಾಗದ ಹುಡುಗರ ಮಾತಿಗೆ ಮರುಳಾಗಿ ಮನೆ ಕಟ್ಟಲು 10.5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಸುಮಾರು 4 ವರ್ಷಗಳಾಗಿವೆ. ಈಗಾಗಲೇ ಸಿದ್ದರಾಜು 10.5 ಲಕ್ಷ ರೂ. ಫೈನಾನ್ಸ್‌ ಗೆ ಪಾವತಿಸಿದ್ದಾರೆ. ಆದರೆ, ಇನ್ನೂ 14.5 ಲಕ್ಷ ರೂ. ಕಟ್ಟಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಬ್ಯಾಂಕಿನ ಸಿಬ್ಬಂದಿ, ಸಿದ್ದರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಜು ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದರು, ಇದೀಗ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ಫೈನಾನ್ಸ್ ಸಿಬ್ಬಂದಿ ಪದೇ ಪದೇ ಸಿದ್ದರಾಜು ಅವರ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಯಿಂದ ಹೊರ ಹಾಕುತ್ತೇವೆ ಎಂದು ಧಮಕಿ ಹಾಕುವುದು, ಮನೆ ಖಾಲಿ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಸಿದ್ದರಾಜು ಕುಟುಂಬ ಬಡ ರೈತರಾಗಿದ್ದು, ಇಷ್ಟೊಂದು ಬಡ್ಡಿ ಭರಿಸುವ ಶಕ್ತಿ ಅವರಿಗಿಲ್ಲ. ನಾವು ಬಡ್ಡಿ ಕಡಿಮೆ ಮಾಡಿ ಎಂದು ಫೈನಾನ್ಸ್‌ ನವರಿಗೆ ಪದೇ ಪದೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.ಬಡ ಸಿದ್ದರಾಜು ಅವರಿಂದ ಈಗಾಗಲೇ ಅಸಲು ಹಣ ಕಟ್ಟಿಸಿಕೊಂಡಿದ್ದಾರೆ. ಹೀಗಾಗಿ, ಸಂಪೂರ್ಣ ಬಡ್ಡಿಯನ್ನು ಫೈನಾನ್ಸ್‌ ನವರು ಮನ್ನಾ ಮಾಡಿ ಮನೆಯ ದಾಖಲೆ ನೀಡಬೇಕು. ಸಾಲ ತೀರುವಳಿ ಪತ್ರವನ್ನೂ ಕೊಡಬೇಕು. ಇಲ್ಲದಿದ್ದಲ್ಲಿ ಫೈನಾನ್ಸ್ ಕಚೇರಿಯಿಂದ ನಾವು ಕದಲುವುದಿಲ್ಲ ಎಂದು ಅವರು ಎಚ್ಚರಿಸಿದರು. ರೈತ ಸಂಘದ ಮುಖಂಡರಾದ ಮಂಡಕಳ್ಳಿ ಮಹೇಶ, ಚಂದ್ರಶೇಖರ, ರಾಘವೇಂದ್ರ, ಉಮೇಶ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಯದೇವದಲ್ಲಿ ಹಿರಿಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್
ಕಬ್ಬಿನ ಬಿಲ್‌ ಪಾವತಿಗೆ ಆಗ್ರಹಿಸಿ ರೈತರ ಧರಣಿ