ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲಾ ಕೇಂದ್ರವಾರ ರಾಯಚೂರು ನಗರದಲ್ಲಿ ಬೀದಿ ನಾಯಿಗಳುಹಾಗೂ ಬಿಡಾಡಿದನಗಳ ಹಾವಳಿ ಮಿತಿಮೀರಿದ್ದು ಇದರಿಂದಾಗಿ ಮಂದಿ ರೋಸಿಹೋಗಿದ್ದಾರೆ.
ಬೀದಿ ನಾಯಿಗಳ ದಾಳಿ ಪ್ರಕರಣಗಳೂ ಪದೇ ಪದೆ ಘಟಿಸುತ್ತಿವೆ. ಹಗಲು ರಾತ್ರಿ ಎನ್ನದೇ ರಸ್ತೆ, ಬಡಾವಣೆಗಳಲ್ಲಿ ಬಿಡಾಡಿದನಗಳ ನಿಂತು ಜನರಿಗೆ ಕಾಟಕೊಡುತ್ತಿದ್ದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆಯು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಜನಾಕ್ರೋಶ ದಟ್ಟವಾಗುತ್ತಿದೆ.ಭೀತಿಯಲ್ಲಿಯೇ ಓಡಾಟ: ಕೆಲ ತಿಂಗಳ ಹಿಂದೆ ಬೀದಿ ನಾಯಿಗಳ ದಾಳಿಗೆ ಯುವತಿ ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಹತ್ತಾರು ಜನರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯ ಪಡಿಸಿತ್ತು. ಇದರಲ್ಲಿ ಹಿರಿಯರು, ಮಧ್ಯ ವಯಸ್ಕರು ಹಾಗೂ ಮಕ್ಕಳು ಬೀದಿನಾಯಿಗಳ ಬಾಧೆಗೆ ತುತ್ತಾಗಿದ್ದರು. ಹೀಗೆ ನಿರಂತರವಾಗಿ ಬೀದಿ ನಾಯಿಗಳ ಕಾಟದಿಂದ ಜನರು ರಾತ್ರಿಯಷ್ಟೇ ಅಲ್ಲ ಬೆಳಗಿನ ವೇಳೆಯಲ್ಲಿಯೂ ರಸ್ತೆ, ವೃತ್ತ, ಬಡಾವಣೆಗಳಲ್ಲಿ ಭೀತಿಯಿಂದಲೇ ಓಡಾಟ ಮಾಡುವಂತಹ ದುಸ್ಥಿತಿ ನಗರದಾದ್ಯಂತ ನಿರ್ಮಾಣಗೊಂಡಿದೆ.
ಇನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಸಾವಿರಾರು ಬಿಡಾಡಿದನಗಳು ಬೀಡುಬಿಟ್ಟು ಹಗಲು-ರಾತ್ರಿ ಎನ್ನದೇ ಜನರಿಗೆ ಕಾಟ ಕೊಡುತ್ತಿವೆ. ರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಸೇರುವ ಬಿಡಾಡಿ ದನಗಳು ಜನರ ಓಡಾಟದ ಜೊತೆಗೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯನ್ನುಂಟು ಮಾಡುತ್ತಿವೆ. ರಾತ್ರಿ ಸಮಯದಲ್ಲಿ ಖಾಲಿ ರಸ್ತೆಯಲ್ಲಿ ಬೀದಿ ನಾಯಿಗಳ ಮತ್ತು ಬಿಡಾಡಿದಗಳ ಕಾರುಬಾರೇ ದೊಡ್ಡದಾಗಿರುತ್ತದೆ. ಇದು ನಿವಾಸಿಗಳ ನಿದ್ದೆ ಗೆಡಿಸುವಂತೆ ಮಾಡಿದೆ.ನಿಯಂತ್ರಣಕ್ಕೆ ಸಹಕರಿಸಿ: ರಾಯಚೂರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಸುಮಾರು 24.75 ಲಕ್ಷ ರು. ಮೊತ್ತದ ಟೆಂಡರ್ ಕರೆದು, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸೂಕ್ತ ಕ್ರಮವಹಿಸಲಾಗುತ್ತಿದೆ ಎಂದು ಪಾಲಿಕೆಯ ಆಯುಕ್ತ ಜುಬಿನ್ ಮೋಹಪಾತ್ರ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರನ್ನು ಒಳಗೊಂಡಂತೆ ಸುಮಾರು 10 ತಂಡಗಳನ್ನು ರಚಿಸಿ ಪ್ರತಿನಿತ್ಯ ವಿವಿಧ ಬಡಾವಣೆಗಳಲ್ಲಿ ಗಸ್ತಿ ನಡೆಸಿ ಬೀದಿ ನಾಯಿಗಳನ್ನು ಬೇರೆಡೆ ಸಾಗಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿದ್ದು, ಸುಮಾರು 1,375 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಸುವ ಕಾರ್ಯ ಕೈಗೊಳ್ಳಲಾಗಿದೆ.ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ವಿಶೇಷ ಕ್ರಮ ವಹಿಸಲಾಗುತ್ತಿದೆ. ನಾಯಿ, ದನ ಹಾಗೂ ಹಂದಿಗಳ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಾಚರಣೆಯು ಪ್ರಾರಂಭವಾಗಿದ್ದು, ಜನರು ಬಿಡಾಡಿ ದನಗಳನ್ನು ಮನಸಿಗೆ ಬಂದಂತೆ ರಸ್ತೆಯಲ್ಲಿ ಬಿಡಬಾರದು. ಈಗಾಗಲೆ 11 ಸಾವಿರ ದಂಡವಿಧಿಸಿ ಕೆಲವು ದನಗಳ ಮಾಲೀಕರಿಗೆ ಮಹಾನಗರ ಪಾಲಿಕೆಯಿಂದ ಎಚ್ಚರಿಕೆ ನೀಡಲಾಗಿದೆ.ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಂಪೂರ್ಣವಾಗಿ ವಿಫಲಗೊಂಡಿದೆ. ಮಕ್ಕಳು, ವೃದ್ಧರು ಸೇರಿದಂತೆ ಜನರ ಮೇಲೆ ದಾಳಿ ನಡೆಸುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು.
- ಬಾಬುರಾವ್, ಮುಖಂಡ