ಯಲಬುರ್ಗಾ:
ತಾಲೂಕಿನ ಹಿರೇವಂಕಲಕುಂಟಾ ಹಾಗೂ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಸ್ ನಿಲ್ದಾಣ, ಬುದ್ಧ, ಬಸವ, ಅಂಬೇಡ್ಕರ್ ಭವನದ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಎರಡ್ಮೂರು ತಿಂಗಳ ಹಿಂದೆಯೇ ಈ ಕಾಮಗಾರಿಗಳಿಗೆ ಸಾರಿಗೆ ಸಚಿವರು ಚಾಲನೆ ನೀಡಬೇಕಾಗಿತ್ತು. ಅವರಿಗೆ ಮೋಣಕಾಲಿನ ಶಸ್ತ್ರಚಿಕಿತ್ಸೆ ಆಗಿದ್ದರಿಂದ ತಡವಾಯಿತು ಎಂದರು.
ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದೆ. ಸುಳ್ಳು ಹೇಳುವವರನ್ನು ಜನರು ಬೇಗ ನಂಬುತ್ತಾರೆ ಎಂದ ಅವರು, ಯಾರು ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸುತ್ತಾರೋ ಅಂತಹವರನ್ನು ಜನ ಚುನಾಯಿಸುವ ಪರಿಪಾಠ ಅಳವಡಿಸಿಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಸಿಗುತ್ತದೆ ಎಂದು ಹೇಳಿದರು.ಈ ಗ್ರಾಮದ ಕಲ್ಯಾಣ ಮಂಟಪಕ್ಕೆ ₹ ೮ ಕೋಟಿ, ಹಿರೇವಂಕಲಕುಂಟಾ ಗ್ರಾಮದ ಬಸ್ ನಿಲ್ದಾಣಕ್ಕೆ ₹೩.೫೦ ಕೋಟಿ ಹಾಗೂ ಉಪ್ಪಲ್‌ದಿನ್ನಿ ಕ್ರಾಸ್ ಹತ್ತಿರ ಬಸ್ ನಿಲ್ದಾಣಕ್ಕೆ ₹೩ ಕೋಟಿ, ಮಂಗಳೂರು ಗ್ರಾಮದ ನಿಲ್ದಾಣಕ್ಕೆ ₹೬ ಕೋಟಿ ಅನುದಾನವನ್ನು ಸಾರಿಗೆ ಸಚಿವರು ಮಂಜೂರಾತಿ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಹಾಗೂ ಗೃಹ ಲಕ್ಷ್ಮೀ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯಾದ್ಯಂತ ಸಂಚರಿಸುವ ಅನುದಾನವನ್ನು ರಾಜ್ಯ ಸರ್ಕಾರ ೫ ನಿಗಮಗಳಿಗೆ ₹ 10500 ಕೋಟಿ ನೀಡುತ್ತಿದೆ. ನಮ್ಮ ಎರಡು ತಾಲೂಕಿನಿಂದ ಈ ವರೆಗೆ 1.62 ಕೋಟಿ ಮಹಿಳೆಯರು ನಾನಾ ಭಾಗಗಳಿಗೆ ಸಂಚಾರ ಕೈಗೊಂಡಿದ್ದಾರೆ ಎಂದು ಹೇಳಿದರು.ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರಡ್ಡಿ, ಮುಖ್ಯಮಂತ್ರಿ ೨೦೦ ಹೊಸ ಬಸ್ ಖರೀದಿಸಲು ಅನುಮತಿ ನೀಡಿದ್ದಾರೆ. ಶಾಲಾ ಮಕ್ಕಳಿಗೆ, ಪುರುಷರಿಗೆ ಬಸ್‌ನಿಂದ ತೊಂದರೆ ಆಗದಿರಲೆಂದು ಹೆಚ್ಚಿನ ಬಸ್ ಓಡಿಸಲಾಗುತ್ತಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ತಳವಾರ, ಸಾರಿಗೆ ಅಧಿಕಾರಿ ಎಂ. ರಾಚಪ್ಪ, ರಮೇಶ ಚಿಣಗಿ, ಹೇಮಂತರಾಜ್, ಮಲ್ಲಿಕಾರ್ಜುನ, ಬೋರಯ್ಯ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ, ಮುಖಂಡರಾದ ರಾಘವೇಂದ್ರ ಜೋಶಿ, ಕರಿಬಸಪ್ಪ ನಿಡಗುಂದಿ, ವೀರನಗೌಡ ಬಳೂಟಗಿ, ಹನುಮಂತಗೌಡ ಚೆಂಡೂರು, ಮಹೇಶ ಹಳ್ಳಿ, ಅಪ್ಪಣ್ಣ ಜೋಶಿ, ಆನಂದ ಉಳ್ಳಾಗಡ್ಡಿ, ಡಾ. ಶಿವನಗೌಡ ದಾನರಡ್ಡಿ, ರುದ್ರಪ್ಪ ಮರಕಟ್, ಬಸವರಾಜ ಹಿರೇಮನಿ ಇದ್ದರು.