ಅನ್ಯಭಾಷೆ ಗೌರವಿಸಿ, ಕನ್ನಡಕ್ಕೆ ಆದ್ಯತೆ ನೀಡಿ: ಬಸು ಬೇವಿನಗಿಡದ

KannadaprabhaNewsNetwork |  
Published : Apr 08, 2025, 12:30 AM IST
ಕಲಘಟಗಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದರು. | Kannada Prabha

ಸಾರಾಂಶ

ಕಲಘಟಗಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸು ಬೇವಿನಗಿಡದ ಉದ್ಘಾಟಿಸಿದರು.

ಕಲಘಟಗಿ: ಅನ್ಯ ಭಾಷೆ ಗೌರವಿಸಿ, ಆದರೆ ನಮ್ಮತನ ಮರೆಯದೆ ಕನ್ನಡ ಭಾಷೆ ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು, ಅಂದಾಗ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸು ಬೇವಿನಗಿಡದ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮಾತೃಭಾಷೆಯಲ್ಲಿ ಓದಲು ಬರೆಯಲು ಕಲಿಸಿ, ವ್ಯಾಕರಣ, ಛಂದಸ್ಸು ಹೇಳಿಕೊಡಿ. ಮಕ್ಕಳಿಗೆ ಪಾಲಕರು ಪುಸ್ತಕ ಓದಿಸುವ ಹವ್ಯಾಸ ರೂಢಿಸಬೇಕು. ಅಂದಾಗ ಸಮ್ಮೇಳನ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.

''''''''ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನು, ತೆಂಗಿನ ನೀರು ಕೊಂಡು ಬಂಗಾರ ಮಾರಿ ತೊಳೆದೇನ'''''''' ಎಂಬ ತಾಯಂದಿರ ಹಾಡಿನ ಮೂಲಕ ಜಾನಪದ ಸಾಹಿತ್ಯಕ್ಕೆ ಮೆರಗು ತಂದುಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, ಸರ್ಕಾರ ಅಳಿವಿನ ಅಂಚಿನಲ್ಲಿರುವ ಕನ್ನಡ ಶಾಲೆಗೆ ಹೆಚ್ಚಿನ ಅನುದಾನ ನೀಡಿ ಬಲವರ್ಧನೆ ಮಾಡಬೇಕು. ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಅನುದಾನ ನೀಡಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಶಿವಣ್ಣ ಅದರಗುಂಚಿ ಮಾತನಾಡಿ, ಸಾಹಿತ್ಯಕ್ಕೆ ಜೀವ ತುಂಬುವ ಕಲಾವಿದರ ಗೌರವಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ನಾನು ರಂಗಭೂಮಿ ಕಲಾವಿದನಾಗಿ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಹಲವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕ ಪ್ರದರ್ಶನ ಮಾಡುತ್ತಾ ಬಂದು ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ.

ನಾಟಕ ಅಕಾಡೆಮಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೂ ಈಗ ಕಲಘಟಗಿ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಿದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಬೆಳಗ್ಗೆ ನೌಕರರ ಭವನದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿ, ಕನ್ನಡ ಸಾಹಿತ್ಯ ಸಮ್ಮೇಳನದ ರಥಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಹೊನ್ನೋಲೆ, ಕಿರಿಯ ದಿವಾಣಿ ನ್ಯಾಯಾಧೀಶ ಗಣೇಶ್ ಎನ್. ಚಾಲನೆ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷ ಶಿವಣ್ಣ ಅದರಗುಂಚಿ ಅವರನ್ನು ಭವ್ಯ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು. ವಿವಿಧ ಗಲ್ಲಿಗಳಲ್ಲಿ ಗೊಂಬೆ ಕುಣಿತ, ಡೊಳ್ಳು, ಜಗ್ಗಲಗಿ ಮೇಳಗಳೊಂದಿಗೆ ಸಾಗಿತು.

ಲೇಖಕಿ ವೈ.ಪಿ. ಸೋಲಾರಗೊಪ್ಪ ಬರೆದ ಮನಸಿನ ಮಾತು ಕವನ ಸಂಕಲನವನ್ನು ಹಿರಿಯ ಸಾಹಿತಿ ಕೆ.ಬಿ. ಪಾಟೀಲ ಕುಲಕರ್ಣಿ ಬಿಡುಗಡೆ ಮಾಡಿದರು.

ತಾಪಂ ಇಒ ಪರಶುರಾಮ ಸಾವಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ರಮೇಶ ಸೋಲಾರಗೊಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ ಮುಕ್ಕಲ, ಕೆ.ಬಿ. ಪಾಟೀಲ್ ಕುಲಕರ್ಣಿ, ಎಂ.ಆರ್. ತೋಟಗಂಟಿ, ಮಹೇಶ್ ಹೊರಕೇರಿ, ಎಚ್.ಎನ್. ಸುಣಗದ, ನಾಗರಾಜ್ ಬಿದರಳ್ಳಿ, ಪುಂಡಲಿಕ ಯಲ್ಲಾರಿ, ಬಿಇಒ ಉಮಾದೇವಿ ಬಸಾಪುರ, ಗೀತಾ ಮರಲಿಂಗಣ್ಣವರ, ವೈ.ಬಿ. ದಾಸನಕೊಪ್ಪ, ಮಂಜುನಾಥ ಅಂಗಡಿ, ಶಿವಯ್ಯ ತೇಗೂರಮಠ, ಪ್ರಭು ರಂಗಾಪುರ, ನವೀನ ಗಾರಗಿ, ಗುರುಲಿಂಗ ಉಣಕಲ್ಲ, ಸಾತಪ್ಪ ಕುಂಕೂರ ಇತರರು ಇದ್ದರು.ಹಿಂದಿ ಭಾಷೆ ಹೇರಿಕೆ ಸಲ್ಲ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ನಾವೆಲ್ಲರೂ ದೇಶದ ಅಭಿವೃದ್ಧಿ, ಶಿಕ್ಷಣ ವ್ಯವಸ್ಥೆ, ಉದ್ಯೋಗ, ಜಿಡಿಪಿ, ಟೆಕ್ನಾಲಜಿ, ಬೇರೆ ದೇಶದ ಆಗು-ಹೋಗುಗಳ ಕುರಿತು ಯಾರು ಕೂಡಾ ಚಿಂತನೆ ಮಾಡದೆ, ದಿನ ಬೆಳಗಾದರೆ ಜಾತಿ ವ್ಯವಸ್ಥೆ ಬಗ್ಗೆ ಮಾತಾಡುತ್ತಾ ಕಾಲಹರಣ ಮಾಡುತ್ತಿದ್ದೇವೆ.20 ವರ್ಷಗಳಿಂದ ನಮ್ಮ ನೆಲದಲ್ಲಿ ನೆಲೆಸಿರುವವರು ಕನ್ನಡ ಭಾಷೆ ಕಲಿಯುತ್ತಿಲ್ಲ, ಕನ್ನಡಿಗರಾದ ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆ ಹೇರಿಕೆಯಾಗುತ್ತಿದೆ ಎಂದರೆ ಇದು ಯಾವ ನ್ಯಾಯ? ನಮ್ಮ ಸರ್ಕಾರ ಕನ್ನಡಕ್ಕೆ ಆದ್ಯತೆ ನೀಡುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ