ಬಿಸಿಲಿಗೆ ಬೆದರಿ ಮನೆಯಿಂದ ಆಚೆ ಬರಲು ಜನರ ಹಿಂದೇಟು

KannadaprabhaNewsNetwork |  
Published : Apr 22, 2026, 02:30 AM IST
ಪೋಟೊ-೨೧ ಎಸ್.ಎಚ್.ಟಿ. ೧ಕೆ- ಬಿಸಿಲಿನ ತಾಪದಿಂದ ಜನರು ಹೊರಬರದೇ ಇರುವುದರಿಂದ ರಸ್ತೆಗಳಲ್ಲಿ ಬಿಕೋ ಎನ್ನುವ ಪರಿಸ್ಥಿತಿ ಕಂಡುಬರುತ್ತಿದೆ. | Kannada Prabha

ಸಾರಾಂಶ

ಯಾವುದೇ ಮನೆಯಲ್ಲೂ ಫ್ಯಾನ್, ಕೂಲರ್, ಏಸಿ ಇಲ್ಲದೇ ಇರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಮರಗಳ ನೆರಳನ್ನೇ ಆಸರೆಯಾಗಿ ಪಡೆಯುತ್ತಿದ್ದಾರೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಪ್ರಸಕ್ತ ಸಾಲಿನ ಬೇಸಿಗೆಯ ಬಿಸಿಲು ಜನಸಾಮಾನ್ಯರ ಜೀವನದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಪ್ರಮುಖ ರಸ್ತೆಗಳು ಜನ, ವಾಹನ ಸಂಚಾರ ಇಲ್ಲದೇ ಖಾಲಿ ಖಾಲಿಯಾಗಿ ಕಂಡುಬರುತ್ತಿವೆ.ಯಾವುದೇ ಮನೆಯಲ್ಲೂ ಫ್ಯಾನ್, ಕೂಲರ್, ಏಸಿ ಇಲ್ಲದೇ ಇರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಮರಗಳ ನೆರಳನ್ನೇ ಆಸರೆಯಾಗಿ ಪಡೆಯುತ್ತಿದ್ದಾರೆ. ಬೆಳಗ್ಗೆ ೯ ಗಂಟೆಯಿಂದ ಶುರುವಾಗುವ ಬಿಸಿಲು ಸಂಜೆ ೫ ಗಂಟೆಯವರೆಗೂ ಪ್ರತಾಪ ತೋರುತ್ತಿದೆ. ಬಿಸಿಲಿನ ಆರ್ಭಟ ಹೆಚ್ಚಾಗುತ್ತಿರುವುದರಿಂದ ವೃದ್ಧರು ಮನೆಯಿಂದ ಹೊರ ಬರುವ ಸಾಹಸಕ್ಕೆ ಮುಂದಾಗುತ್ತಿಲ್ಲ.ಜಿಲ್ಲೆಯಲ್ಲಿ ಮಂಗಳವಾರ ೩೮ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾತ್ರಿ ವೇಳೆ ಕನಿಷ್ಠ ೨೩ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ರಾತ್ರಿ ವೇಳೆ ವಿದ್ಯುತ್ ಸಮಸ್ಯೆ ತಲೆದೋರಿದರೆ ಮನೆಗಳಲ್ಲಿ ನಿದ್ದೆ ಮಾಡುವುದೂ ಕಷ್ಟ. ಮುಂದಿನ ದಿನಗಳಲ್ಲಿ ಉಷ್ಣಾಂಶವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ನೀಡಿವೆ. ೪೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದರೆ ಜನ ಇನ್ನೂ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.ಮಧ್ಯಾಹ್ನ ಕೆಲವೇ ಕೆಲವು ನಿಮಿಷ ಬಿಸಿಲಿಗೆ ಸಿಲುಕಿದರೂ ಬೆವರಿನ ಸ್ನಾನವಾಗುತ್ತದೆ. ಎಸಿ(ಹವಾ ನಿಯಂತ್ರಿತ) ಇಲ್ಲದ ವಾಹನಗಳಲ್ಲಿ ಪ್ರಯಾಣಿಸುವುದು ದುಸ್ತರವಾಗಿದೆ. ಮಾರ್ಚ್ ತಿಂಗಳ ಮಧ್ಯೆದಿಂದಲೇ ಸರಾಸರಿ ೩೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದೀಗ 38 ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ಫ್ಯಾನ್‌ಗಳು ನಿರಂತರವಾಗಿ ಚಾಲನೆ ಇದ್ದರೂ ಬಿಸಿಗಾಳಿ ಬರುತ್ತಿದೆ. ಇನ್ನು ಶ್ರೀಮಂತರು ಕೊಠಡಿಗಳಿಗೆ ಹವಾನಿಯಂತ್ರಣ ಯಂತ್ರ(ಎಸಿ) ಅಳವಡಿಸಿಕೊಂಡಿದ್ದು, ಅಂಥವರು ಎಸಿಯಿಂದ ಹೊರಗಡೆ ಬರುವುದು ಕಷ್ಟವಾಗುತ್ತಿದೆ. ಬಿಸಿಲಿನ ಶಾಖದಲ್ಲಿ ಹೊರಗಡೆ ಬಂದ ಜನರು ಲೀಟರ್‌ಗಟ್ಟಲೇ ನೀರು ಕುಡಿದು ದಣಿವು ನೀಗಿಸಿಕೊಳ್ಳಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ತಾಲೂಕಿನಲ್ಲಿ ಬಿಸಿಲಿನ ತಾಪಮಾನ ವಿಪರೀತ ಏರಿಕೆ ಕಾಣುತ್ತಿದೆ. ನಿತ್ಯವೂ ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಕೆಲಸ ಕಾರ್ಯಗಳಿಗೆ ಜನ ಬರುತ್ತಿದ್ದು, ತಾಲೂಕು ಆಡಳಿತ ಜನತೆಯ ಸುರಕ್ಷತೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಬಿಸಿಗಾಳಿ ನಡುವೆ ಜನರು ದಿನಚರಿ ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ತಂಪು ಪಾನೀಯಗಳು, ನೀರು, ನೆರಳಿನ ಸ್ಥಳಗಳಿಗೆ ಬೇಡಿಕೆ ಹೆಚ್ಚಾಗಿದೆ. ತೀವ್ರ ಬಿಸಿಲಿನ ಪ್ರತಾಪಕ್ಕೆ ಜನತೆ ಬಸವಳಿದಿದ್ದು, ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ.ಹವಾಮಾನ ಇಲಾಖೆಯ ವರದಿ ಪ್ರಕಾರ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ತಾಲೂಕು ಆಡಳಿತ, ಆರೋಗ್ಯ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಸಲಹೆ ನೀಡಿ ಜನರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಮುಖಂಡ ಫಕ್ಕಿರೇಶ ರಟ್ಟಿಹಳ್ಳಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ