ಹಾನಗಲ್ಲ: ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರ ಅನುಕಂಪ ಪಡೆಯುವ ಎನ್‌ಡಿಎ ಸರ್ಕಾರದ ರಾಜಕೀಯ ಹುನ್ನಾರ ಈಗ ಬಯಲಾದಂತಾಗಿದೆ. ಬಿಲ್ ಬಿದ್ದು ಹೋದರೆ ಬಿಜೆಪಿಗೆ ಬಹು ದೊಡ್ಡ ಲಾಭ ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆವರೆ ಇದನ್ನು ಒಪ್ಪಿಕೊಂಡಂತಾಗಿದೆ. ದೇಶದ ಹಿತದಲ್ಲಿ ಇಂತಹ ರಾಜಕೀಯ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹರಿಹಾಯ್ದರು.
ಎನ್‌ಡಿಎ ಸರ್ಕಾರ ೨೦೨೪ರಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟೆಬಿಟ್ಟೆವು ಎನ್ನುವಂತೆ ಮಾಡಿದರು. ಆದರೆ ಈವರೆಗೂ ಅದರ ಸುದ್ದಿಯೇ ಇರಲಿಲ್ಲ. ಈಗ ಮೀಸಲಾತಿ ಮುನ್ನೆಲೆಗೆ ತಂದು ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿ ಸ್ಥಾನದ ಗೌರವ ಕುಗ್ಗಿಸಿದೆ. ಮಹಿಳಾ ಮೀಸಲಾತಿಗೆ ಎನ್‌ಡಿಎ ಸರ್ಕಾರಕ್ಕೆ ಅಷ್ಪೊಂದು ಕಾಳಜಿ ಇದ್ದರೆ ಈಗಿರುವ ಜನಂಖ್ಯೆಯ ಆಧಾರದ ಮೇಲೆಯೇ ಮೀಸಲಾತಿ ಪ್ರಕಟಿಸಲಿ. ಮತ್ತೆ ಈಗ ನಡೆದಿರುವ ಜನಗಣತಿ ಆಧರಿಸಿ ಜನಸಂಖ್ಯೆ ಪರಿಗಣಿಸಿ ಮೀಸಲಾತಿಗೆ ಕಾಯುವುದೇಕೆ ಎಂದು ಪ್ರಶ್ನಿಸಿದರು.
ತೆರಿಗೆ ಹಂಚಿಕೆಯಲ್ಲಿಯೂ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ತಾರತಮ್ಯ ಮಾಡುತ್ತಿದೆ. ಈಗ ಮಹಿಳಾ ಮೀಸಲಾತಿಯಲ್ಲಿಯೂ ಅದೇ ಹುನ್ನಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಇದಕ್ಕೆ ನಮ್ಮ ಪಕ್ಷದಿಂದ ಮಹಿಳೆಯರಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗುತ್ತಾರೆ. ನಮ್ಮ ಈ ವಿಚಾರವನ್ನು ಪಕ್ಷಾತೀತವಾಗಿ ಎಲ್ಲ ಮಹಿಳೆಯರು ಬೆಂಬಲಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭೆ ಮಾಜಿ ಅಧ್ಯಕ್ಷರಾದ ಮಮತಾ ಆರೆಗೊಪ್ಪ, ರಾಧಿಕಾರ ದೇಶಪಾಂಡೆ, ಸದಸ್ಯೆ ಶಂಶಿಯಾಬಾನು ಬಾಳೂರ ಹಾಗೂ ಗೀತಾ ಪೂಜಾರ, ಕಾಂಗ್ರೆಸ್ ಪಕ್ಷದ ವಿವಿಧ ಮಹಿಳಾ ಘಟಕಗಳ ಪದಾಧಿಕಾರಿಗಳು, ಮಹಿಳಾ ಜನಪ್ರತಿನಿಧಿಗಳು ಇದ್ದರು.