ಬ್ಯಾಡಗಿ: ರೈತಾಪಿ ವರ್ಗದ ಜನರು ಬಹುಬೇಗ ಮೋಸದ ಬಲೆಗೆ ಬೀಳುತ್ತಾರೆ, ಆದರೆ ರೈತರಿಂದಲೇ ದೇಶ ನಡೆಯುತ್ತಿದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು, ಹಣದಾಸೆಗೆ ಕಳಪೆ ಗುಣಮಟ್ಟದ ಕೃಷಿ ಪರಿಕರ ವಿತರಿಸಿ ಮೋಸವೆಸಗಿದಲ್ಲಿ ಅಂತಹ ಬೀಜ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುವುದಲ್ಲದೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೂಡ ಹಿಂಜರಿಯುವುದಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.
ರೈತರ ಜೊತೆ ಭಾವನಾತ್ಮಕ ಸಂಬಂಧವಿರಲಿ: ಬೀಜ ಮಾರಾಟಗಾರರು ರೈತರ ಜೊತೆ ವ್ಯಾವಹಾರಿಕ ಎನ್ನುವುದಕ್ಕಿಂತ ಭಾವನಾತ್ಮಕ ಸಂಬಂಧಗಳನ್ನು ಹೊಂದಿರಬೇಕು ಅಂದಾಗ ಮಾತ್ರ ಅವರಿಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ, ನೀವು ಬೀಜ ಮಾರಾಟ ಮಾಡಿ ಕಂಪನಿಗಳ ಕಡೆಗೆ ಕೈತೋರುವುದನ್ನು ಒಪ್ಪಲು ಸಾಧ್ಯವಿಲ್ಲ, ಬಿತ್ತನೆ ಮಾಡಿದ ಬೀಜ ಹುಟ್ಟದಿದ್ದರೇ ಅಥವಾ ಬೆಳೆದು ಫಲವನ್ನು ನೀಡದಿದ್ದರೇ ಮಾರಾಟಗಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಕಳೆದ ವರ್ಷ ತಾಲೂಕಿನ ರೈತರಿಗೆ ಬೀಜ ಮಾರಾಟಗಾರರು ಮೋಸ ಮಾಡಿದರೇ ರೈತರು ನನ್ನ ಕಚೇರಿ ಎದುರು ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿಕೊಂಡ ಅವರು ಇಂತಹ ಘಟನೆಗಳು ನಡೆದಲ್ಲಿ ಖುದ್ದಾಗಿ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.
ಕಳಪೆ ಪರಿಕರ ಮಾರಿದರೇ ಎಚ್ಚರಿಕೆ: ಕೃಷಿ ಪರಿಕರ ಮಾರಾಟಗಾರರು ಕಳಪೆ ಬೀಜ, ಗೊಬ್ಬರ, ಹೆಚ್ಚಿನ ಬೆಲೆ ವಸೂಲಿ ಅಥವಾ ಲಿಂಕ್ ಮಾಡಿ ಗೊಬ್ಬರ ಮಾರಾಟ ಮಾಡುವಂತಹ ಅನೈತಿಕ ಕ್ರಮಗಳಿಂದ ದೂರವಿರಬೇಕು, ವ್ಯಾಪಾರದ ಜೊತೆಗೆ ಮಾನವೀಯತೆ ರೂಢಿಸಿಕೊಂಡು ಅನ್ನದಾತನ ಅನ್ಯಾಯವಾಗದಂತೆ ಅವರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಬೀಜ ನೀತಿಗೆ ತಿದ್ದುಪಡಿ ತನ್ನಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮಾರಾಟ ಮಾಡಿದ ಬೀಜ ಕೇವಲ ಶೇ. 60ರಷ್ಟು ಮೊಳಕೆಯೊಡೆದರೇ ಸಾಕು ಬೀಜ ಕಂಪನಿಗಳು ಬಚಾವ್, ಅಷ್ಟಕ್ಕೂ ಬಿತ್ತನೆ ಮಾಡಿದ ಬೀಜ ಕಳಪೆ ಎಂದು ಸಾಬೀತಾದಲ್ಲಿ ತಪ್ಪಿತಸ್ಥ ಕಂಪನಿಗೆ ಕೇವಲ 500 ರು. ದಂಡ ವಿಧಿಸಲಾಗುತ್ತದೆ, ಪ್ರಸ್ತುತ ರಾಜ್ಯದಲ್ಲಿರುವ ಹೆಲ್ಮೆಟ್ ರಹಿತ ಬೈಕ್ ಚಾಲನೆಗೆ ಇರುವಂತಹ ದಂಡಕ್ಕಿಂತ ಕಡಿಮ ಮೊತ್ತ, ಹೀಗಿರುವಾಗ ರೈತರ ಬಗ್ಗೆ ಬೀಜ ಕಂಪನಿಗಳಿಗೆ ಭಯವಿಲ್ಲದಂತಾಗಿದೆ, ಮೋಸ ಮಾಡಿದ ಅದೆಷ್ಟೋ ಕಂಪನಿಗಳು ನಮ್ಮ ವಿರುದ್ಧ ದೂರು ದಾಖಲಿಸುವಂತೆ ಸ್ವತಃ ಹೇಳಿದ ಉದಾಹರಣೆಗಳಿವೆ. ಬೀಜ ನೀತಿಗೆ ತಿದ್ದುಪಡಿ ತರುವ ಮೂಲಕ ಇಂತಹ ಮೋಸದ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ರೈತ ಸಂಘದ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರು, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ, ಉಪಾಧ್ಯಕ್ಷ ಎನ್.ಟಿ. ಪಾಟೀಲ ಸೇರಿದಂತೆ ಕೃಷಿಕ ಸಮಾಜದ ಪದಾಧಿಕಾರಿಗಳು, ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಸ್ವಾಗತಿಸಿ, ವಂದಿಸಿದರು.