ಬಿಸಿಲಿನ ಬೇಗೆಗೆ ತತ್ತರಿಸಿದ ಜನತೆ

KannadaprabhaNewsNetwork |  
Published : Feb 07, 2024, 01:47 AM IST
ಬಿಸಿಲಿನ ಬೇಗೆ ತಣಿಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಎಳನೀರಿನ ಮೊರೆ ಹೋದ ಜನತೆ. | Kannada Prabha

ಸಾರಾಂಶ

ಬಿಸಿಲಿಗೆ ರಸ್ತೆಗಳು ಕಾದ ಕೆಂಡದಂತಾಗುತ್ತವೆ. ಸಿಸಿ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಇನ್ನು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಕಿ ಸಂಚರಿಸುವುದೇ ದೊಡ್ಡ ಸವಾಲು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಕಳೆದ ಒಂದು ವಾರದಿಂದ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಬಿಸಿಲಿನ ಪ್ರಖರತೆಗೆ ಜನತೆ ಹೈರಾಣಾಗಿದ್ದಾರೆ. ಮಂಗಳವಾರ (ಫೆ. 06) 35.19 ಸೆಲ್ಸಿಯಸ್‌ ತಾಪಮಾನ ಇತ್ತು. ಬೇಸಿಗೆ ಆರಂಭದಲ್ಲೇ ಈ ಪರಿಸ್ಥಿತಿ ಉದ್ಭವವಾಗಿದೆ!

ಈ ಬಾರಿ ಮಳೆಯಾಗದೆ ಭೂಮಿಯಲ್ಲಿ ತೇವಾಂಶದ ಕೊರತೆಯಾಗಿ ಬಿಸಿಲಿನ ಪ್ರಖರತೆ ಏರಿಕೆಯಾಗುತ್ತಲೇ ಸಾಗಿದೆ. ಬೆಳಗ್ಗೆ 8 ಗಂಟೆಯಾದರೆ ಸಾಕು ಮಧ್ಯಾಹ್ನದ ಬಿಸಿಲಿನ ಅನುಭವ. ಅಷ್ಟೊಂದು ಪ್ರಮಾಣದ ಬಿಸಿಲಿನ ಪ್ರಕರತೆ ಇರುತ್ತದೆ.

ಕೆಂಡವಾಗುವ ರಸ್ತೆಗಳು

ರಸ್ತೆಗಳು ಕಾದ ಕೆಂಡದಂತಾಗುತ್ತವೆ. ಸಿಸಿ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಇನ್ನು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಕಿ ಸಂಚರಿಸುವುದೇ ದೊಡ್ಡ ಸವಾಲು.

ನಿರಂತರ ಬಿಸಿಲಿನಿಂದಾಗಿ ಮಕ್ಕಳು, ವಯೋವೃದ್ಧರಿಗೆ ಅಷ್ಟೇ ಅಲ್ಲದೇ ವಯಸ್ಸಿನವರಿಗೂ ಆರೋಗ್ಯ ಸಮಸ್ಯೆ ಕಂಡುಬರುತ್ತಿವೆ. ಮಕ್ಕಳು ನಿತ್ಯವೂ ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ. ವೃದ್ಧರು ಮನೆಯಲ್ಲಿ ಕುಳಿತುಕೊಳ್ಳಲು ಆಗದಂತಹ ಸ್ಥಿತಿ ಉದ್ಭವವಾಗಿದೆ. ಹೊರಗಡೆ ಸಂಚರಿಸಿದರೆ ಬಿಸಿಲಿನ ಬರೆ, ಮನೆಯಲ್ಲಿ ಕುಳಿತರೆ ಬೀಸುವ ಬಿಸಿಗಾಳಿಯಿಂದಾಗಿ ಜನತೆ ಹೈರಾಣಾಗಿ ಹೋಗಿದ್ದಾರೆ.

ಇನ್ನೂ ಹೆಚ್ಚಾಗಲಿದೆ

ಇದು ಫೆಬ್ರವರಿ, ಬೇಸಿಗೆಯ ಆರಂಭ. ಈಗಲೇ ಇಂತಹ ಸ್ಥಿತಿ ಉದ್ಭವವಾಗಿದೆ. ಇನ್ನು ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಂತೂ ಇದರ ದುಪ್ಪಟ್ಟು ಬಿಸಿಲಿನ ಬೇಗೆ ಉಂಟಾಗಲಿದೆ. ಪ್ರತಿವರ್ಷಕ್ಕಿಂತ ಈ ಬಾರಿ ಬಿಸಿಲಿನ ಆರ್ಭಟ ಕೊಂಚ ಹೆಚ್ಚಾಗಲಿದೆ ಎಂಬುದು ವೈದ್ಯರ, ಪರಿಸರ ಪ್ರೇಮಿಗಳ ಅಭಿಪ್ರಾಯ.

ಮಹಾನಗರದಲ್ಲಿ ರಸ್ತೆ ಅಗಲೀಕರಣ, ಮನೆಗಳ ನಿರ್ಮಾಣಕ್ಕಾಗಿ ಹಲವು ಬೃಹತ್‌ ಮರಗಳನ್ನು ತೆರವುಗೊಳಿಸಲಾಗಿದೆ. ಆದರೆ, ಮತ್ತೆ ಹೊಸ ಸಸಿಗಳ ನೆಡುವ ಕಾರ್ಯವಾಗಿಲ್ಲ. ಇದರಿಂದಾಗಿಯೂ ಬಿಸಿಲಿನ ಬೇಗೆ ಕೊಂಚ ಹೆಚ್ಚಿದೆ. ಎಲ್ಲೆಡೆಯೂ ಮರಗಳ ತೆರವು ಕಾರ್ಯವಾಗುತ್ತಿದೆಯೇ ಹೊರತು ನೆಡುವ ಕಾರ್ಯವಾಗುತ್ತಿಲ್ಲ. ಕೆಲವು ಸ್ವಯಂಸೇವಾ ಸಂಸ್ಥೆಗಳು ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿವೆ. ಆದರೂ ಮರಗಳನ್ನು ಬೆಳೆಸುವಲ್ಲಿ ಜನತೆ ಆಸಕ್ತಿ ತೋರದಿರುವುದೇ ಇದಕ್ಕೆ ಕಾರಣ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯ.

ಎಳನೀರು, ಕಲ್ಲಂಗಡಿಗೆ ಮೊರೆ

ಏರುತ್ತಿರುವ ಬಿಸಿಲಿನ ದಾಹ ತಣಿಸಿಕೊಳ್ಳಲು ಜನತೆ ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಎಳನೀರಿನ ಬೆಲೆಯಲ್ಲೂ ಕೊಂಚ ಏರಿಕೆಯಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ₹25ಕ್ಕೆ ಒಂದು ಎಳನೀರು ಸಿಗುತ್ತಿತ್ತು. ಆದರೆ, ಈಗ ₹35ಕ್ಕೆ ಒಂದು ಎಳನೀರು ಮಾರಾಟ ಮಾಡಲಾಗುತ್ತಿದೆ. ಬೆರಳೆಣಿಕೆಯ ವ್ಯಾಪಾರಸ್ಥರು ಈಗಲೂ ₹25ಕ್ಕೆ ಒಂದು ಎಳನೀರು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಂಪು ಪಾನೀಯಗಳನ್ನು ಕುಡಿದು ದಾಹ ತಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಮಾರಾಟ ಹೆಚ್ಚಳಪ್ರತಿವರ್ಷ ಮಾರ್ಚ್ ತಿಂಗಳಿಂದ ಎಳನೀರಿನ ಬೇಡಿಕೆ ಮತ್ತು ಮಾರಾಟ ಹೆಚ್ಚುತ್ತಿತ್ತು. ಈ ಬಾರಿ ಫೆಬ್ರವರಿ ತಿಂಗಳಲ್ಲಿಯೇ ಹೆಚ್ಚಿನ ಗ್ರಾಹಕರು ಕಂಡುಬರುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಎಳನೀರು ಹೆಚ್ಚು ಮಾರಾಟವಾಗುತ್ತಿವೆ ಎಂದು ಎಳನೀರು ಮಾರಾಟಗಾರ ಸೈಯ್ಯದ ಮುಲ್ಲಾ ತಿಳಿಸಿದರು.

ಜಾಗೃತಿ

ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಮರಗಿಡಗಳ ಮಾರಣಹೋಮ ನಡೆಯುತ್ತಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ನಗರಗಳಿಂದು ಕಾಂಕ್ರಿಟೀಕರಣವಾಗುತ್ತಿವೆ. ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ವಸುಂಧರಾ ಫೌಂಡೇಶನ್‌ನ ಅಧ್ಯಕ್ಷ ಮೇಘರಾಜ ಕೆರೂರ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ