ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ಇದೀಗ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಇದರಿಂದ ಜನ ಹೈರಾಣಾಗಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಜನನ- ಮರಣ ನೋಂದಣಿ ಶುಲ್ಕ ಏರಿಕೆ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ಸಹ ಬೆಲೆ ಏರಿಕೆ ಮಾಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಪರಿತಪಿಸುವಂತಾಗಿದೆ ಎಂದರು.
ಮೇ 11ರಂದು ನಡೆಯುವ ಜನಾಕ್ರೋಶ ಯಾತ್ರೆಯ ಸಮಾರೋಪ ಸಮಾರಂಭವನ್ನು ಎಲ್ಲರೂ ಸೇರಿ ಯಶಸ್ವಿಯಾಗೋಳಿಸೋಣ ಎಂದು ಕರೆ ನೀಡಿದರು.ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಮಾತನಾಡಿ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರು ಕಂಗಾಲಾಗಿದ್ದಾರೆ. ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದು, ತುಘಲಕ್ ದರ್ಬಾರ್ ನಡೆದಿದೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ತಿದ್ದುಕೊಳ್ಳುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುತ್ತಿದ್ದು, ಈ ಸರ್ಕಾರ ಬರೀ ಸುಳ್ಳು ಹೇಳುವುದರಲ್ಲಿ ಸಮಯ ಕಳೆಯುತ್ತಿದೆ. ಇದೊಂದು ಅವಿವೇಕಿ ಸರ್ಕಾರ ಎಂದು ದೂರಿದರು.