ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮೈತೊಳೆದ ದೇವರು ಅಂತಾರಲ್ಲಾ ಆ ರೀತಿ ಕೆಲಸ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೂ, ದಲಿತರಿಗೂ ಯಾವುದೇ ರೀತಿ ಕೆಲಸ ಮಾಡುತ್ತಿಲ್ಲ. ಯಾವ ಜವಾಬ್ದಾರಿ ಇಲ್ಲದೇ ಬೇಜವಾಬ್ದಾರಿಯಿಂದ ರಾಜ್ಯ ಸರ್ಕಾರ ವರ್ತನೆ ಮಾಡುತ್ತಿದೆ. ಜನ ಕಾಯ್ತಾ ಇದ್ದಾರೆ ಯಾವತ್ತು ಚುನಾವಣೆ ಬರುತ್ತೋ? ಸರ್ಕಾರ ವಿಸರ್ಜನೆ ಮಾಡುವ ರೀತಿಯಲ್ಲಿ ಕಾಯ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಹೊಂದಾಣಿಕೆ ಆಗಿ ಹೋಗಿದೆ. ನಾಟಿ ಕೋಳಿ ತಿಂದ ನಂತರ ಇಡ್ಲಿ ತಿಂದ ನಂತರ, ನಾಟಿ ಕೋಳಿ ಫ್ರೈ ತಿಂದ ನಂತರ ಹೊಂದಾಣಿಕೆ ಆಗಿದೆ ಅಂತ ಹೇಳ್ತಾ ಇದ್ದಾರೆ ಸಂತೋಷ. ಆದರೇ ರಾಜ್ಯದ ಜನರಿಗೆ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿ. ₹50 ಕೋಟಿ, ₹20 ಕೋಟಿ ಆದರೂ ಮಾಡಿ, ಉಪ್ಪಿನಕಾಯಿ ತರಹ ಆದರೂ ಮಾಡಿ ಎಂದು ಕುಟುಕಿದರು.ಸಿಎಂ, ಡಿಸಿಎಂ ನಾಟಿ ಕೋಳಿ ಸಂಧಾನ ವಿಚಾರ ಪ್ರಸ್ತಾಪಿಸಿ, ನಾಟಿ ಕೋಳಿಯನ್ನು ನಾನು ಮುಂದುವರಿಸುತ್ತೇನೆ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ. ನಾಟಿ ಕೋಳಿ ತಿಂತಾರೋ ನಾಟಿ ಫ್ರೈ ತಿಂತಾರೊ ಅಷ್ಟೊಂದು ಇಂಪಾರ್ಟೆಂಟ್ ಕೊಡಬೇಕಾ ನಾಟಿ ಕೋಳಿಗೆ? ಸರ್ಕಾರದ ಅಭಿವೃದ್ಧಿ ಬಗ್ಗೆ ಏನು ಇಂಪಾರ್ಟ್‌ನ್ಸ್ ಇಲ್ಲ. ಮಾಧ್ಯಮದಲ್ಲಿ ಬರುತ್ತೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬ್ರೇಕ್ ಫಾಸ್ಟ್ ಅಂತ. ಮೆನು ಏನು ನಾಟಿ ಕೋಳಿ, ನಾಟಿ ಫ್ರೈ ಅಂತ. ಅರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಾಗ ಅವರ ಹೊಂದಾಣಿಕೆ ಚರ್ಚೆ ಮಾಡಲಿ. ಸಾಯ್ತಾರೊ ಅವರು ಬದುಕುತ್ತಾರೊ ಅದರ ಬಗ್ಗೆನೂ ಚರ್ಚೆ ಮಾಡಲಿ. ಅದರ ಜೊತೆಗೆ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚೆ ಮಾಡಲಿ. ಶೇ.10 ರಷ್ಟಾದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಇಬ್ಬರು ಒಟ್ಟಿಗೆ ಸೇರಿದ್ದೇವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ ಅಂತ ಚರ್ಚೆ ಮಾಡಿದರೆ ಓಕೆ. ನಾಟಿ ಕೋಳಿ ಬದುಕುತ್ತೊ, ನಾಟಿ ಕೋಳಿ ಸಾಯುತ್ತೊ ಆ ಪ್ರಶ್ನೆ ಬೇರೆ. ಅಲ್ಲಿ ಸೇರಿದಾಗಲೂ ಕೂಡ ನಾಟಿ ಕೋಳಿ ತಿನ್ನುವುದರ ಬಗ್ಗೆ ವಿಚಾರ ಮಾಡ್ತಾರೆ ವಿನಃ ಅಭಿವೃದ್ಧಿ ಬಗ್ಗೆ ಇಲ್ಲ ಎಂದರು.ಬಿಜೆಪಿಯಲ್ಲಿ ಏನಾಗುತ್ತೆ ಅಂತಾ ಹೇಳೋಕೆ ನಾನು ಇಷ್ಟಪಡಲ್ಲ:
ಬಿಜೆಪಿ ರೆಬೆಲ್ಸ್ ನಾಯಕರ ವಿಚಾರದ ಕುರಿತು ಮಾತನಾಡಿ, ಬಿಜೆಪಿಯಲ್ಲಿ ಏನಾಗುತ್ತೆ ಅಂತಾ ಹೇಳೋಕೆ ನಾನು ಇಷ್ಟಪಡಲ್ಲ, ಬಿಜೆಪಿಯಲ್ಲಿ ಏನೇ ರೆಬೆಲ್ ಇದ್ರೂ, ಅದನ್ನು ಸುಧಾರಿಸಿ, ಸರಿಮಾಡುವ ಶಕ್ತಿ ಕೇಂದ್ರ ನಾಯಕರಿಗಿದೆ. ಅಮಿತ್ ಶಾ ಹಾಗೂ ಮೋದಿ ಅವರಿಗೆ, ದೊಡ್ಡ ಸಂಘಟನೆ ಇದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತರಹ ಇಲ್ಲ. ಇಲ್ಲಿ ವ್ಯಕ್ತಿ ಮೇಲೆ ಬಿಜೆಪಿ ಪಕ್ಷ ಇಲ್ಲ, ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯ ಅಲ್ಲ ಎಂದರು.ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ತರಹ ನಾಮ್ ಕೆ ವಾಸ್ತೆ ಎಐಸಿಸಿ ಅಧ್ಯಕ್ಷರಾಗಿ ನನ್ನ ಕೈಯಲ್ಲಿ ಏನೂ ಇಲ್ಲ, ರಾಹುಲ್ ಗಾಂಧಿ ಅವರ ಕಡೆ ಬೊಟ್ಟು ಮಾಡಿ ತೋರಿಸಿದರು. ಕಾಂಗ್ರೆಸ್ ಪಕ್ಷ ದೇಶದಲ್ಲಿ ನಿರ್ನಾಮ ಆಗ್ತಿದೆ. ಡಿಕೆಶಿ ಮುಖ್ಯಮಂತ್ರಿ ಆದರೆ ಸಿದ್ದರಾಮಯ್ಯ ಸಹಕಾರ ಕೊಡಲ್ಲ. ಸಿದ್ದರಾಮಯ್ಯ ಮುಂದುವರೆದ್ರೆ ಡಿಕೆಶಿ ಸಹಕಾರ ಕೊಡಲ್ಲ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಯಲ್ಲ. ಯಾವತ್ತು ಬೇಕಾದ್ರೂ ಚುನಾವಣೆ ಬರಬಹದು ಎಂದು ಭವಿಷ್ಯ ನುಡಿದರು.ಕಾರ್ಯಕರ್ತರ ಬಲದಿಂದ ಬಿಜೆಪಿ ನಿಂತಿದೆ:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಮುಂದುವರೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಮುಂದುವರೆಯೋದು, ಬಿಡೋದು ನನ್ನ ಕಂಡಿಷನ್ ಅಲ್ಲ. ನನ್ನ, ವಿಜಯೇಂದ್ರ ಮೇಲೆ ಬಿಜೆಪಿ ನಿಂತಿಲ್ಲ. ಬಿಜೆಪಿ ನಿಂತಿರೋದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ, ಸಾವಿರ ನಿಷ್ಠಾವಂತ ಕಾರ್ಯಕರ್ತರ ಬಲದಿಂದ. ಆ ಕಾರ್ಯಕರ್ತರ ಬಲದಿಂದ ಬಿಜೆಪಿ ನಿಂತಿದೆ. ವಿಜಯೇಂದ್ರ ಮುಂದುವರೆದ್ರೆ ಏನಾಗುತ್ತೆ, ಈಶ್ವರಪ್ಪ ಬಿಜೆಪಿ ಸೇರಿದ್ರೆ ಏನಾಗುತ್ತೆ ಎಂಬುವುದರ ಮೇಲೆ ಬಿಜೆಪಿ ನಿಂತಿಲ್ಲ ಎಂದು ತಿಳಿಸಿದರು.ಮೋದಿ, ಅಮಿತ್ ಶಾ ನಂತರ ಯಾರು ನಾಯಕರು ಎಂಬ ಪ್ರಶ್ನೆಗೆ, ಬಿಜೆಪಿಯಲ್ಲಿ ಅನೇಕ ನಾಯಕರು ಬರ್ತಾರೆ. ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಪದಾಧಿಕಾರಿಗಳ ತಂಡ ಇದೆ. ಕೇಂದ್ರದಲ್ಲೂ ಇದೆ, ರಾಜ್ಯದಲ್ಲೂ ಇದೆ. ಇಲ್ಲಿ ಸರ್ವಾಧಿಕಾರಿ ಧೋರಣೆ ಈ ಪಕ್ಷದಲ್ಲಿ ನಡೆಯಲ್ಲ. ಹಿಂದೆ ನಾವು ಬಿಜೆಪಿ ಸರಿ ಹೋಗಬೇಕು ಅಂತಾ ನಾವು ಹೋದ್ವಿ. ಆದರೆ ಅದನ್ನು ನಮ್ಮ ಪದಾಧಿಕಾರಿಗಳು ಸಹಿಸಲಿಲ್ಲ. ನಮ್ಮನ್ನು ಬಿಜೆಪಿ ಇಂದ ತೆಗೆದರು. ಯತ್ನಾಳ್ ಹಾಗೂ ಈಶ್ವರಪ್ಪ ಬಿಜೆಪಿಗೆ ಅನಿವಾರ್ಯ ಅಲ್ಲ. ನಮ್ಮ ವಿಚಾರಗಳ ಬಗ್ಗೆ ನಾವು ಚರ್ಚೆಯನ್ನೇ ಮಾಡುತ್ತಿಲ್ಲ ಎಂದರು.ಕನ್ಹೇರಿ ಶ್ರೀಗಳು ನೀಡಿರುವ ಬಸವ ತಾಲಿಬಾನಿಗಳ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ, ದೇಶದ ಬಗ್ಗೆ ಕಮ್ಮಿ ನಿಷ್ಠೆ ಇರತಕ್ಕಂತಹ ಕಮ್ಯನಿಷ್ಠ ಪಾರ್ಟಿಯ ರೂಪದಲ್ಲಿ ಕೆಲವು ಬಸವ ಸನ್ಯಾಸ ಸ್ವಾಮೀಜಿಗಳು ಈ ರೀತಿ ಮಾಡುತ್ತಿದ್ದು, ಬಸವ ತಾಲೀಬಾನಿಗಳಾಗಿದ್ದಾರೆ. ಅವರ್ಯಾರದು ಸಾಮೂಹಿಕವಾಗಿ ಹೇಳಿಲ್ಲ, ಕೆಲವು ವ್ಯಕ್ತಿಗಳು ಅಂತ ಹೇಳಿದ್ದಾರೆ. ಉದಾಹರಣೆಗೆ ದೇವರು ತೆಗೆದು ಮೂಲೆಗೆ ಎಸಿರಿ, ಮಾಂಸ ತಿನ್ರಿ, ದಾರೂ ಕುಡಿರಿ, ಈ ರೀತಿ ಎಂದವರಿಗೆ ಬಸವ ತಾಲಿಬಾನಿಗಳು ಎಂದಿದ್ದಾರೆ ವಿನಃ ಉಳಿದಂತೆ ಹಿಂದೂ ಸಮಾಜದ ಎಲ್ಲರ ಬಗ್ಗೆ ಗೌರವ ಇದೆ. ಈ ಲಿಂಗಾಯತ ಸಮಾಜದಲ್ಲಿರುವಂತಹ ಸ್ವಾಮೀಜಿಗಳು ಈ ರೀತಿ ಹೇಳಿಕೆ ಕೊಟ್ಟಿದ್ದಾರಲ್ಲ, ಅವರಿಗೆ ಬಸವ ತಾಲಿಬಾನಿಗಳಿಗೆ ಕರೆದಿದ್ದಾರೆ ವಿನಃ ಉಳಿದವರಿಗಲ್ಲ. ಲಿಂಗಾಯತ ಸಮುದಾಯದಲ್ಲಿ ಕೆಲವರು ಬಸವ ಸಂಸ್ಕೃತಿ ಅಂತ ಹೊರಟರು, ಈ ಸಂಸ್ಕೃತಿ ಹಿಂದೆ ಹೋದವರು ದೇವರನ್ನು ಟೀಕೆ ಮಾಡಿದರು. ಮಾಂಸ ತಿನ್ನಿ, ದಾರೂ ಕುಡಿಯಿರಿ ಎಂದ ಬಸವ ಅನುಯಾಯಿಗಳಿಗೆ , ಸನ್ಯಾಸಿಗಳಿಗೆ ಬಸವ ತಾಲಿಬಾನಿಗಳು ಅಂತ ಕರೆದಿದ್ದಾರೆ. ಇನ್ನು ಬೇರೆ ಯಾರಿಗೂ ಅಂದಿಲ್ಲ ಎಂದು ಸಮರ್ಥಿಸಿಕೊಂಡರು.