ನೆಟ್ ವರ್ಕ್ ಸಂಪರ್ಕ ಇಲ್ಲದೇ ಜನರ ಪರದಾಟ

KannadaprabhaNewsNetwork | Published : Nov 16, 2024 12:37 AM

ಸಾರಾಂಶ

ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಂಪರ್ಕದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಒದಗಿಸಲು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಂಪರ್ಕದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಒದಗಿಸಲು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಬಿ.ಎಸ್.ಎನ್.ಎಲ್. ಇಲಾಖೆ ಅಧಿಕಾರಿ-ಸಿಬ್ಬಂದಿ ಬ್ರಿಟೀಷ್ ಆಡಳಿತ ಪದ್ಧತಿಯನ್ನು ಕೈ ಬಿಟ್ಟು ಜನಸ್ನೇಹಿಯಾಗಿ ವ್ಯವಹರಿಸಬೇಕು. ಒಂದು ತಿಂಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಬೇಕು ಎಂದರು.ಗ್ರಾಮಾಂತರ ಭಾಗಗಳಲ್ಲಿ ತೀವ್ರವಾಗಿ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ ತಕ್ಷಣದಿಂದಲೇ ಪರಿಹಾರಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅನೇಕ ಬಾರಿ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸುವ ಕುರಿತ ಸಭೆಗಳನ್ನು ನಡೆಸಲಾಗಿದೆ. ಆದರೂ ಸಮಸ್ಯೆ ಇನ್ನೂ ಜೀವಂತವಾಗಿದೆ. ಟವರ್‌ಗಳನ್ನು ನಿರ್ಮಿಸಲು ಇರುವ ಭೂಸ್ವಾಧೀನ ಪ್ರಕ್ರಿಯೆ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಜನಸಾಮಾನ್ಯರ ನಿರೀಕ್ಷೆಯಂತೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.ಶಿವಮೊಗ್ಗ-ರಾಣೆಬೆನ್ನೂರು ರೈಲುಮಾರ್ಗಕ್ಕೆ ಸಂಬಂಧಿಸಿದಂತೆ ಶೇ. 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅನುದಾನದ ಬೇಡಿಕೆ ಸಲ್ಲಿಸಲು ಅನುಕೂಲವಾಗಲಿದೆ. ಇಲ್ಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ರೈತರಿಗೆ ಹಂಚುವ ಪರಿಹಾರದಲ್ಲಿ ಅನ್ಯಾಯವಾಗಬಾರದು. ಭೂಮಿ ವಶಪಡಿಸಿಕೊಂಡ ರೈತರಿಗೂ ಸಹ ಶೇ. 90ರಷ್ಟು ಹಣ ಸಂದಾಯವಾಗಿರಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಪಟ್ಟಣ ಪ್ರದೇಶದಲ್ಲಿಯೇ ನೆಟ್‌ವರ್ಕ್‌ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಬಿಎಸ್‍ಎನ್‍ಎಲ್ ಜನರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನಗರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತುಂಬಾ ಇದೆ. ಈ ಸಮಸ್ಯೆ ಶಾಸಕರ ಕಚೇರಿಯನ್ನು ಬಿಟ್ಟಿಲ್ಲ. ತುರ್ತು ಸಂದರ್ಭದಲ್ಲಿ ಕಚೇರಿಯಿಂದ ಹೊರ ಬಂದು ಮಾತನಾಡುವ ಪ್ರಸಂಗ ಎದುರಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್‌ ಸದಸ್ಯರಾದ ಬಲ್ಕಿಷ್‍ಬಾನು, ಡಾ.ಧನಂಜಯಸರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

141 ನೆಟ್‌ವರ್ಕ್‌ ಕಂಬ ಅಳವಡಿಸಲು ಕ್ರಮ

ಜಿಲ್ಲೆಯ ಗ್ರಾಮಾಂತರ ಭಾಗ ಸೇರಿದಂತೆ ಸುಮಾರು 141 ನೆಟ್‌ವರ್ಕ್‌ ಕಂಬ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 138 ನೆಟ್‌ವರ್ಕ್‌ ಸ್ಥಾವರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 63 ನೆಟ್‌ವರ್ಕ್‌ ಅಳವಡಿಕೆಯಲ್ಲಿ 15 ನೆಟ್‌ವರ್ಕ್‌ ಸಂಪರ್ಕ ಕಾರ್ಯ ಪೂರ್ಣಗೊಂಡಿವೆ. ಕಂದಾಯ ಭೂಮಿಗೆ ಸಂಬಂಧಿಸಿದ 55 ಪ್ರಕರಣಗಳಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ 17 ನೆಟ್‌ವರ್ಕ್‌ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಬಿ.ಎಸ್.ಎನ್.ಎಲ್. ಅಧಿಕಾರಿ ವೆಂಕಟೇಶ್ ಮಾಹಿತಿ ನೀಡಿದರು.

ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗಾಗಿ ಮುಕ್ತಗೊಳಿಸಲಾಗುವುದು. ಈಗಾಗಲೇ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್ ಮಾಸಾಂತ್ಯದೊಳಗೆ ಸೇತುವೆ ಮೇಲೆ ವಾಹನಗಳು ಪ್ರಾಯೋಗಿಕವಾಗಿ ಸಂಚರಿಸಲಿವೆ. ಸಾಗರ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಹೆದ್ದಾರಿಗಳ ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಬಂದಿವೆ. ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Share this article