ಸಾರಿಗೆ ಸಂಸ್ಥೆಯಲ್ಲಿ 9 ಸಾವಿರ ಹುದ್ದೆ ನೇಮಕಾತಿ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Nov 16, 2024, 12:37 AM ISTUpdated : Nov 16, 2024, 12:23 PM IST
ನೇಮಕಾತಿ | Kannada Prabha

ಸಾರಾಂಶ

ಅಪಘಾತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಗುತ್ತಿದೆ. ಅಪಘಾತ ವಿಮಾ ಯೋಜನೆಯಡಿ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ₹1 ಕೋಟಿ ವಿಮೆ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ಹುಬ್ಬಳ್ಳಿ:  ಸಾರಿಗೆ ಸಂಸ್ಥೆಗಳಲ್ಲಿ 9 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಇಲ್ಲಿನ ಗೋಕುಲರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಏಳೆಂಟು ವರ್ಷಗಳಿಂದ ಸಾರಿಗೆ ಸಂಸ್ಥೆಗಳಲ್ಲಿ ನೇಮಕಾತಿಯೇ ಆಗಿರಲಿಲ್ಲ. 9 ಸಾವಿರ ಹುದ್ದೆಗಳ ಜತೆಗೆ 1 ಸಾವಿರ ಹುದ್ದೆಗಳನ್ನು ಅನುಕಂಪ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಅಪಘಾತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಗುತ್ತಿದೆ. ಅಪಘಾತ ವಿಮಾ ಯೋಜನೆಯಡಿ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ₹1 ಕೋಟಿ ವಿಮೆ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಯುಪಿಐ ಮೂಲಕ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ. ಸಾರಿಗೆ ಸಂಜೀವಿನಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯಡಿ ನೌಕರರು ಹಾಗೂ ಅವರ ಕುಟುಂಬಸ್ಥರು ಚಿಕಿತ್ಸಾ ಸೌಲಭ್ಯ ಪಡೆಯಬಹುದು ಎಂದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಸಂಸ್ಥೆಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಬಸ್‌ ಖರೀದಿ, ನೇಮಕಾತಿ, ಸಕಾಲಕ್ಕೆ ವೇತನ ದೊರೆಯುವಂತಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತಿರಲಿಲ್ಲ ಎಂದರು.

ವೇತನ ಪರಿಷ್ಕರಣೆ ಹಿಂಬಾಕಿ ಬಾಕಿಯಿದೆ. ಸಂಸ್ಥೆಗಳ ಸಾಲ ಹೆಚ್ಚಾಗಿರುವುದರಿಂದ ಸಮಸ್ಯೆಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಸಾರಿಗೆ ಸಂಸ್ಥೆಗಳಿಗೆ 800 ಬಸ್ ನೀಡುವ ನಿಟ್ಟಿನಲ್ಲಿ ಈಗಾಗಲೇ 584 ಬಸ್‌ ಒದಗಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಉಳಿದ ಬಸ್‌ಗಳು ಬರಲಿವೆ. ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿ ₹ 5 ಲಕ್ಷದ ಬದಲಾಗಿ ₹ 10 ಲಕ್ಷ ನೀಡಬೇಕು ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 43 ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. 100 ಬಿಎಸ್-6 ನೂತನ ಗ್ರಾಮಾಂತರ ಮಾದರಿ ವಾಹನಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಎಸ್‌ಬಿಐ-ಅಪಘಾತ ವಿಮಾ ಯೋಜನೆಯಲ್ಲಿ ಈ ವರೆಗೆ 4 ನೌಕರರ ಅವಲಂಬಿತರು ವಿಮಾ ಸೌಲಭ್ಯಕ್ಕೆ ಅರ್ಹರಿದ್ದು, ಇಬ್ಬರು ಮೃತ ನೌಕರರ ಅವಲಂಬಿತರಿಗೆ ತಲಾ ₹ 50 ಲಕ್ಷ ಮೊತ್ತದ ಚೆಕ್‌ನ್ನು ಇದೇ ವೇಳೆ ವಿತರಿಸಲಾಯಿತು.

ಅನುಕಂಪದ ಆಧಾರದ ಮೇಲೆ ನೇಮಕಾತಿಯಾದ 18 ಜನ ತಾಂತ್ರಿಕ ಸಹಾಯಕ ಹಾಗೂ 45 ಕಿರಿಯ ತಾಂತ್ರಿಕ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಆದೇಶ ಪತ್ರ ವಿತರಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಪ್ರಾಸ್ತಾವಿಕ ಮಾತನಾಡಿದರು. ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಸಂಸ್ಥೆ ಉಪಾಧ್ಯಕ್ಷ ಪೀರಸಾಬ್ ಕೌತಾಳ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ, ಮಾಜಿ ಸಂಸದ ಐ.ಜಿ. ಸನದಿ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಟಿಕೆಟ್‌ ದರ ಹೆಚ್ಚಿಸಬೇಕಿದೆ: ಕಾಗೆ

ನೂರಾರು ಸಮಸ್ಯೆಗಳಿದ್ದರೂ ಬದಿಗಿಟ್ಟು ನೌಕರರು ಸೇವೆ ನೀಡುತ್ತಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಿ ನೌಕರರಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕಿದೆ. ನಷ್ಟ ಸರಿದೂಗಿಸಲು ಬಸ್‌ ಪ್ರಯಾಣದ ಟಿಕೆಟ್‌ ದರ ಹೆಚ್ಚಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ಅಭಿಪ್ರಾಯಪಟ್ಟರು.

ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು. ಸಂಸ್ಥೆಯ ಹಿತದೃಷ್ಟಿಯಿಂದ ಸಂಸ್ಥೆಗೆ ₹ 1000 ಕೋಟಿ ವಿಶೇಷ ಅನುದಾನ ನೀಡಬೇಕು. ಶಕ್ತಿ ಯೋಜನೆಯಲ್ಲಿ ಈ ವರೆಗೆ ₹ 2019 ಕೋಟಿ ಆಗಿದ್ದು, ₹ 1613 ಕೋಟಿ ಸಂಸ್ಥೆಗೆ ಬಂದಿದೆ. ಇನ್ನೂ ₹ 406 ಕೋಟಿ ಸರ್ಕಾರ ಕೊಡಬೇಕಿದ್ದು, ಇವೆಲ್ಲವೂ ಬಂದರೆ ಹಾಲಿ ಹಾಗೂ ನಿವೃತ್ತ ನೌಕರರಿಗೆ ಸೌಲಭ್ಯ ನೀಡಬಹುದಾಗಿದೆ ಎಂದರು.

ಬಸ್‌ನಲ್ಲಿ ಪಯಣ

ವಾಯವ್ಯ ಸಾರಿಗೆ ಸಂಸ್ಥೆಯ ಸಂಸ್ಥಾಪನಾ ದಿನದ ಕಾರ್ಯಕ್ರಮಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ ಲಾಡ್‌ ಪ್ರವಾಸಿ ಮಂದಿರದಿಂದ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಸಾಥ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ