- ಕೊಪ್ಪಳದಲ್ಲಿ ಹೆಚ್ಚುತ್ತಲೇ ಇದೆ ತಾಪಮಾನ
- ಹೈರಾಣಾದ ಜನರು ತಂಪು ಪಾನೀಯಗಳ ಮೊರೆ- ಮನೆಯಿಂದ ಆಚೆಯೇ ಬರದ ಜನರು ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಜಿಲ್ಲೆಯಾದ್ಯಂತ ತಾಪಮಾನ ಮಿತಿ ಮೀರಿ ಏರಿಕೆಯಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಅದರಲ್ಲೂ ಮಾ.31 ರಿಂದ ಏ.3 ರ ವರೆಗೂ ಉಷ್ಣ ಗಾಳಿ ಇರಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಜನ ಕಂಗಾಲಾಗಿದ್ದು, ಮನೆಯಿಂದ ಆಚೆ ಬರುತ್ತಿಲ್ಲ. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಪ್ರಮುಖ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿರುತ್ತವೆ.ಬಿಸಿ ಗಾಳಿಯ ಎಚ್ಚರಿಕೆಗೆ ಅಂಜಿದ ಜನ ಮುಂಜಾನೆ 10-11 ಗಂಟೆಗೆಲ್ಲ ತಮ್ಮ ಮಾರುಕಟ್ಟೆ, ಕಚೇರಿ, ಖರೀದಿ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ ಮನೆಗೆ ಮರಳುತ್ತಿದ್ದಾರೆ. ಇದರಿಂದ ಮಧ್ಯಾಹ್ನ 12 ಗಂಟೆಗೆಲ್ಲ ಮಾರುಕಟ್ಟೆ ಅಕ್ಷರಶಃ ಬಿಕೋ ಎನ್ನುತ್ತಿರುತ್ತವೆ.
ಮನೆ ಒಳಗೆ ಸೇರಿಕೊಳ್ಳುವ ಜನ ಮತ್ತೆ ಹೊರ ಬೀಳುವುದು ಸಂಜೆ 5 ಗಂಟೆಯ ಬಳಿಕವೇ. ಹೀಗಾಗಿ, ಮಧ್ಯಾಹ್ನದ ವೇಳೆಯಲ್ಲಿ ನಗರ ಸೇರಿದಂತೆ ಜಿಲ್ಲಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ ಅಘೋಷಿತ ಬಂದ್ ಜಾರಿಯಲ್ಲಿರುವಂತೆ ಕಾಣುತ್ತದೆ. ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ನಾಲ್ಕಾರು ಜನರ ಸುಳಿವು ಇರುವುದಿಲ್ಲ, ವಾಹನಗಳು ಅಷ್ಟಕ್ಕಷ್ಟೇ ಎನ್ನುವಂತೆ ಆಗಿದೆ.ಹೆಚ್ಚುತ್ತಲೇ ಇದೆ ತಾಪಮಾನ:
ಕೊಪ್ಪಳ ನಗರ ಮತ್ತು ಜಿಲ್ಲಾದ್ಯಂತ ತಾಪಮಾನ ಹೆಚ್ಚಳವಾಗುತ್ತಲೇ ಇದೆ. 37 ರಿಂದ 41, 42 ವರೆಗೂ ತಾಪಮಾನ ದಾಖಲಾಗುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಹಿಂದೆಂದೂ ಸಹ ಇಷ್ಟೊಂದು ಬಿಸಿಲು ನೋಡಿರಲಿಲ್ಲ. ನಮಗಂತೂ ಸಾಕಾಗಿ ಹೋಗಿದೆ. ಕೆಲಸವೂ ಅಷ್ಟಕ್ಕಷ್ಚೇ ಎನ್ನುವಂತೆ ಆಗಿರುವುದರ ಜೊತೆಗೆ ಈ ಏರುವ ತಾಪಮಾನ ಜೀವ ಹಿಂಡುವಂತೆ ಮಾಡಿದೆ ಎನ್ನುತ್ತಾರೆ ರಸ್ತೆಯಲ್ಲಿ ಹಮಾಲಿ ಮಾಡುತ್ತಿದ್ದ ನಿಂಗಪ್ಪ.ಕೂಲಿಕಾರ್ಮಿಕರು ಹೈರಾಣು:
ಹೆಚ್ಚುತ್ತಿರುವ ತಾಪಮಾನದಿಂದ ಕೂಲಿಕಾರರು ಹೈರಾಣಾಗಿ ಹೋಗಿದ್ದಾರೆ. ಬಿಸಿಲಿನಲ್ಲಿಯೇ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಬರ ಇರುವುದರಿಂದ ಕೆಲಸ ಸಿಗುವುದು ಅಷ್ಟಕ್ಕಷ್ಟೇ ಎನ್ನುವಂತೆ ಇರುವಾಗ ಸಿಕ್ಕ ಕೆಲಸವನ್ನು ಬಿಡದೆ ಉರಿಬಿಸಿಲಿನಲ್ಲಿಯೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಕೃಷಿ ಕಾರ್ಮಿಕರು ಸಹ ಕೂಲಿ ಸಮಯವನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಬೇಗನೆ ಕೆಲಸಕ್ಕೆ ಹೋಗಿ, ಮಧ್ಯಾಹ್ನದ ವೇಳೆಗಾಗಿ ಮರಳಿ ಮನೆಗೆ ಬರುತ್ತಾರೆ. ಮತ್ತೆ ಮಧ್ಯಾಹ್ನದ ನಂತರ ಅಥವಾ ಸಂಜೆಯೇ ಕೆಲಸಕ್ಕೆ ಹೋಗತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದಲೂ ಎಚ್ಚರ:ಹೆಚ್ಚುತ್ತಿರುವ ತಾಪಮಾನದ ಕುರಿತು ಆರೋಗ್ಯ ಇಲಾಖೆಯೂ ಸುತ್ತೋಲೆ ನೀಡಿ, ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.ತಾಪಮಾನ ಹೆಚ್ಚುತ್ತಿರುವುದರ ಜೊತೆಗ ಉಷ್ಣಗಾಳಿ ಬೀಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಮಧ್ಯಾಹ್ನದ ವೇಳೆ ಮನೆಯಿಂದ ಬರಲೇಬಾರದು ಎನ್ನುವಂತೆ ಆಗಿದೆ.ಮುನಿರಾಬಾದ ಕೇಂದ್ರದಲ್ಲಿ ದಾಖಲಾದ ತಾಪಮಾನ:ದಿನಾಂಕ ಗರಿಷ್ಠ ಕನಿಷ್ಠ
ಮಾ. 3 40 24ಮಾ. 2 40 25
ಮಾ. 2 39 24ಮಾ. 2 40 24
ಮಾ. 26 39 23ಮಾ. 25 39 23