ವಿಜಯದಶಮಿ ಸಂಭ್ರಮದಲ್ಲಿ ಮಿಂದೆದ್ದ ಜನತೆ

KannadaprabhaNewsNetwork |  
Published : Oct 03, 2025, 01:07 AM IST
ಬೆಳಗಾವಿ | Kannada Prabha

ಸಾರಾಂಶ

ನಗರದ ಜ್ಯೋತಿ ಕಾಲೇಜು ಮೈದಾನದಲ್ಲಿ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸಾಮೂಹಿಕ ಸೀಮೋಲ್ಲಂಘನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇರಿದಂತೆ ಜಿಲ್ಲಾದ್ಯಂತ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಮತ್ತು ಗುರುವಾರ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಿರಿ-ಕಿರಿಯರು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಸಂಭ್ರಮದಲ್ಲಿ ಮಿಂದೆದ್ದರು. ಪರಸ್ಪರ ಬನ್ನಿ ಕೊಟ್ಟು ನಾವು ನೀವು ಬಂಗಾರದಂಗ ಇರೋಣ ಎಂಬ ಶುಭ ಹಾರೈಕೆಯೊಂದಿಗೆ ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಿದರು.

ಬೆಳಗ್ಗೆಯಿಂದಲೇ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು ಪೂಜೆ ಸಲ್ಲಿಸಿ, ದೇವಿಯನ್ನು ಆರಾಧಿಸಿದರು. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಸುಮಂಗಲೆಯರಿಗೆ ಉಡಿ ತುಂಬಿದರು. ಸಂಜೆ ನೆರೆಹೊರೆ ಮನೆಗೆ ತೆರಳಿ ಬನ್ನಿ ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬನ್ನಿಗಿಡ ಇರುವ ಸ್ಥಳಗಳಲ್ಲಿ ವೇದಿಕೆ ನಿರ್ಮಿಸಿ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು. ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳವರೆಗೆ ನಡೆದ ದೇವಿ ಪುರಾಣ ಪ್ರವಚನಗಳು ಮಂಗಲಗೊಂಡವು.

ಸೀಮೊಲ್ಲಂಘನೆ:

ನಗರದ ಜ್ಯೋತಿ ಕಾಲೇಜು ಮೈದಾನದಲ್ಲಿ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸಾಮೂಹಿಕ ಸೀಮೋಲ್ಲಂಘನೆ ಮಾಡಲಾಯಿತು. ನಗರದ ಪ್ರಮುಖ ದೇವಸ್ಥಾನಗಳ ಪಲ್ಲಕ್ಕಿ ಉತ್ಸವ ನಡೆಯಿತು. ನಗರದ ಕ್ಯಾಂಪ್‌ ಪ್ರದೇಶ, ಬೋಗಾರವೇಸ್‌ ವೃತ್ತ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ತೆರಳಿ, ವಿಸರ್ಜನೆ ಮಾಡಲಾಯಿತು. ವಿವಿಧ ದೇವಸ್ಥಾನಗಳಲ್ಲಿಯೂ ಬನ್ನಿ ಮುಡಿಯಲಾಯಿತು. ಬಳಿಕ ಪರಸ್ಪರರು ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಆಯುಧ ಪೂಜೆ:

ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಮತ್ತು ಗುರುವಾರ ಆಯುಧ ಪೂಜೆ ನಡೆಯಿತು. ರೈತರು ತಮ್ಮ ಕೃಷಿ ಉಪಕರಣ, ಮುದ್ರಕರು ತಮ್ಮ ಮುದ್ರಣಾಲಯ, ನೇಕಾರರು ಕೈಮಗ್ಗ, ಚಾಲಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದರು. ಆಯಾ ವರ್ಗದ ಜನತೆ ತಮ್ಮ ಜೀವನಾಧಾರವಾದ ವಸ್ತುಗಳನ್ನು ಕಬ್ಬು, ಜೋಳ, ಬಾಳೆದಿಂಡು, ಹೂವುಗಳಿಂದ ಅಲಕಂರಿಸಿದ್ದರು. ಆಯುಧಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ವ್ಯಾಪಾರ-ಉದ್ಯಮ ಇನ್ನಷ್ಟು ಹೆಚ್ಚಾಗಲಿ ಎಂದು ಪ್ರಾರ್ಥಿಸಿದರು. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಶುಭ ಸಂದರ್ಭದಲ್ಲಿ ಖರೀದಿಸುವ ವಸ್ತುಗಳು ಮನೆಗಳನ್ನು ಬೆಳಗುತ್ತವೆ ಎಂಬ ನಂಬಿಕೆಯಿಂದ ಜನತೆ ವಾಹನ, ಟಿವಿ, ಫ್ರಿಡ್ಜ್‌ ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ಖರೀದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ