ಪ್ರಸಾದ್ ನಗರೆಹೊನ್ನಾವರ: ಸಾಮಾನ್ಯವಾಗಿ ಮಳೆಗಾಲದ ಅವಧಿಯೆಂದು ಪರಿಗಣಿಸಲಾಗುವ ಸೆಪ್ಟೆಂಬರ್ ತಿಂಗಳಲ್ಲಿಯೇ ತಾಲೂಕಿನಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳಗ್ಗೆಯಿಂದಲೇ ಬಿಸಿಲಿನ ವಾತಾವರಣ ಕಾಣಿಸಿಕೊಳ್ಳುತ್ತಿದ್ದು, ಮಧ್ಯಾಹ್ನದ ವೇಳೆಗೆ ಉಷ್ಣತೆ ಹಾಗೂ ಸೆಕೆಯ ಅನುಭವ ಹೆಚ್ಚಾಗಿದೆ. ಬಿಸಿಲಿನ ಝಳಕ್ಕೆ ಜನ ಕಂಗಾಲಾಗಿದ್ದಾರೆ.
ಮಳೆ ಸಲುವಾಗಿ ಉಪಯೋಗಿಸುತ್ತಿದ್ದ ಛತ್ರಿಯನ್ನು ಜನರು ಬಿಸಿಲಿಂದ ರಕ್ಷಣೆ ಪಡೆಯಲು ಬಳಸಲು ಪ್ರಾರಂಭಿಸಿದ್ದಾರೆ. ಮಳೆಗಾಲದಲ್ಲಿ ಯಾವ ಸಂದರ್ಭದಲ್ಲೂ ಮಳೆ ಸುರಿಯಬಹುದು ಎಂಬ ಕಾರಣಕ್ಕೆ ಕೊಡೆಯನ್ನು ಕೈಯಲ್ಲಿ ಹಿಡಿದು ಹೋಗುವುದು ಸಾಮಾನ್ಯವಾಗಿದೆ.
ಮಳೆ ಕೈಕೊಟ್ಟು ಒಣಹವೆ ಪ್ರಾರಂಭವಾಗಿರುವುದರಿಮದ ಜನರು ಸೆಕೆಯಿಂದ ಬಳಲುವಂತಾಗಿದೆ. ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಬೀಳುವಂತಹ ಸೆಕೆಯ ಅನುಭವ ಸೆಪ್ಟೆಂಬರ್ ತಿಂಗಳಿನಲ್ಲಿ ಆಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಏಳುವ ಸಾಧ್ಯತೆ ನಿಚ್ಚಳವಾಗಿದೆ. ಮಳೆಗಾಲದಲ್ಲೇ ಬಿಸಿಲ ಝಳ ಹೆಚ್ಚುತ್ತಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.ತಾಲೂಕು ಕರಾವಳಿ ಪ್ರದೇಶವಾಗಿರುವುದರಿಂದ ಆರ್ದ್ರತೆ ಹೆಚ್ಚಿರುವ ಸಂದರ್ಭದಲ್ಲಿ ಬಿಸಿಲಿನ ಅನುಭವ ಮತ್ತಷ್ಟು ಹೆಚ್ಚಾಗಿ ಕಂಡುಬರುತ್ತದೆ. ಹವಾಮಾನದಲ್ಲಿ ಆಗುತ್ತಿರುವ ಏರುಪೇರುಗಳಿಂದ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.
ಬಿಸಿಲಿನ ವಾತಾವರಣ: ತಾಲೂಕಿನಲ್ಲಿ ಪ್ರತಿದಿನ ಸರಾಸರಿ 26 ಡಿಗ್ರಿಯಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಗರಿಷ್ಠ 32 ಡಿಗ್ರಿಯವರೆಗೂ ತಲುಪಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಚೆನ್ನೈನಲ್ಲಿ ಮಳೆ ಪ್ರಾರಂಭವಾದರೆ ತಾಲೂಕಿನಲ್ಲಿಯೂ ಮಳೆ ಬೀಳಬಹುದು. ಮೋಡ ಸ್ವಲ್ಪ ಪ್ರಮಾಣದಲ್ಲಿ ಆಗುತ್ತಿದ್ದು, ಚದುರಿದಂತೆ ಮಳೆ ಆಗಾಗ ಬೀಳಬಹುದು. ನಿರೀಕ್ಷಿತ ರೀತಿಯಲ್ಲಿ ಮಳೆ ಬೀಳುವುದಿಲ್ಲ. ಹೀಗಾಗಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ತಾಲೂಕು ಹವಾಮಾನಾಧಿಕಾರಿ ರಮೇಶ್ ತಿಳಿಸಿದರು.