ಗದಗ: ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ಜನ ಎಂದಿಗೂ ಒಪ್ಪುವುದಿಲ್ಲ, ಯಾರು ಕೆಲಸ ಮಾಡಿದ್ದಾರೋ ಅವರಿಗೆ ಜನ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿಗೆ ಸಿದ್ರಾಮುಲ್ಲಾಖಾನ್ ಎಂಬ ಹೇಳಿಕೆ ವಿಚಾರಕ್ಕೆ ಆಕ್ರೋಶಗೊಂಡ ಅವರು, ಯಾರು ಎಲ್ಲ ಸಮುದಾಯಕೋಸ್ಕರ ಕೆಲಸ ಮಾಡುತ್ತಾರೆಯೋ ಅವರನ್ನು ಒಂದು ಸಮುದಾಯದ ಪರ ಎಂದು ಬಿಂಬಿಸುತ್ತಾರೆ. ಇದು ಬಿಜೆಪಿಗರ ಹಳೆಯ ಟ್ಯಾಕ್ಟಿಕ್ಸ್ ಎಂದರು.
ಅನಂತಕುಮಾರ ಹೆಗಡೆ 5 ವರ್ಷ ಏನೂ ಕೆಲಸ ಮಾಡಿಲ್ಲ, ಅವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. 5 ವರ್ಷ ಜನರ ಮುಂದೆ ಬರಲಿಲ್ಲ, ಪಾರ್ಲಿಮೆಂಟ್‌ನಲ್ಲಿ ಒಂದೂ ಪ್ರಶ್ನೆ ಕೇಳಲಿಲ್ಲ, ಈಗ ಎಲೆಕ್ಷನ್ ಬಂದಿದೆ ಎಂದು ಹಿಂದೂ -ಮುಸ್ಲಿಂ ಮಧ್ಯೆ ಭಿನ್ನಾಭಿಪ್ರಾಯ ತರಲು ಯತ್ನಿಸುತ್ತಿದ್ದಾರೆ. ಕರ್ನಾಟಕದ ಜನರ ಪರ ಒಂದೇ ಒಂದು ಪ್ರಶ್ನೆ ಕೇಳದ ಅನಂತಕುಮಾರ್ ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.ಧಾರ್ಮಿಕ ದತ್ತಿ ವಿಧೇಯಕ ವಿಷಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ದೇವಸ್ಥಾನದ ಹುಂಡಿಗೆ ಸರ್ಕಾರ ಕೈ ಹಾಕಿದೆ ಅನ್ನೋದು ಫೇಕ್ ನ್ಯೂಸ್. ಸರ್ಕಾರ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ದೇವಾಲಯದ ಹಣ ದೇವಾಲಯಕ್ಕೇ ಬಳಕೆಯಾಗುತ್ತದೆ. ಸ್ಪಷ್ಟೀಕರಣ ಕೊಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ನಿವಾಸಕ್ಕೆ ಖರ್ಚಾಗಿರುವ ಹಣದ ಕುರಿತು ಚರ್ಚೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾದಾಗ ಕೆಲವು ರಿಪೇರಿ ನಡೆಯುವುದು ಹೊಸತಲ್ಲ. ಖರ್ಚಾಗೋದು ಸರ್ಕಾರಿ ನಿವಾಸಕ್ಕೆ ಸ್ವಂತ ನಿವಾಸಕ್ಕಲ್ಲ, ಮುಂದೆ ಸಿಎಂ ಆಗುವವರೂ ಆ ಸವಲತ್ತು ಪಡೆಯುತ್ತಾರೆ. ಈ ಹಿಂದೆ ಸಿಎಂ ಆದವರೂ ಸಾಕಷ್ಟು ಖರ್ಚು ಮಾಡಿದ್ದಾರೆ. ತಂದೆಯವರು ಸಿಎಂ ಆಗಿದ್ದಾಗ ಆ ಮನೆಯಲ್ಲಿ ಲಿಫ್ಟ್ ಇರಲಿಲ್ಲ. ನಂತರದ ಮುಖ್ಯಮಂತ್ರಿಗಳು ಅಲ್ಲಿ ಲಿಫ್ಟ್ ಹಾಕಿಸಿದ್ದಾರೆ. ಸರಿ ಸುಮಾರು 75 ವರ್ಷ ಮೇಲಾಗಿರುವ ನಿವಾಸಗಳು ರಿಪೇರಿ ವರ್ಕ್ ಅತ್ಯವಶ್ಯ, ಅನಿವಾರ್ಯವಾದ ಖರ್ಚು, ದುಂದುವೆಚ್ಚವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
₹4 ಲಕ್ಷ ಕೋಟಿಯಷ್ಟು ತೆರಿಗೆ ಸಂಗ್ರಹಣವಾಗುತ್ತಿದೆ, ರುಪಾಯಿ ಕೊಟ್ಟರೆ 12 ಪೈಸೆ ವಾಪಸ್ ಬರ್ತಿದೆ, ಹಿಂದುಳಿದ ರಾಜ್ಯಗಳಿಗೆ ಕೊಡಲಿ, ಬೇಡ ಎನ್ನುವುದಿಲ್ಲ, ನಮಗ್ಯಾಕೆ ಅನ್ಯಾಯ ಮಾಡುತ್ತಿದ್ದೀರಿ. ಒಂದು ರುಪಾಯಿಗೆ 12 ಪೈಸೆ ಬದಲು 20ರಿಂದ 25 ಪೈಸೆ ಕೊಡಿ ಅಂತಿದೀವಿ. ಅನ್ಯಾಯ ಸರಿ ಪಡಿಸಲು ಕೇಳಿದ್ದೇವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಇಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ, ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದೇವೆ. ಜನರ ಪರವಾಗಿ ಕೆಲಸ ಮಾಡಿದವರ ಪರವಾಗಿ ಜನ ಹೆಚ್ಚಿನ ಸೀಟ್ ಬರುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಸ್ಥಳೀಯ ಮುಖಂಡರು, ಕುರುಬರ ಸಮಾಜದ ಹಿರಿಯರು ಹಾಜರಿದ್ದರು.