ಚಳ್ಳಕೆರೆ ಈರಣ್ಣನ ತೇರು ನೋಡಲು ಜನವೋ ಜನ

KannadaprabhaNewsNetwork |  
Published : May 03, 2026, 01:15 AM IST
ಚಳ್ಳಕೆರೆಸುದ್ದಿ ಕಡ್ಡಾಯ | Kannada Prabha

ಸಾರಾಂಶ

ಚಳ್ಳಕೆರೆ ನಗರದಲ್ಲಿ ಶನಿವಾರ ಈರಣ್ಣನ ತೇರು ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ನಗರದ ಆರಾಧ್ಯ ದೈವ ಬೇಡಿದವರ ಇಷ್ಟಾರ್ಥ ಈಡೇರಿಸುವ ವೀರಭದ್ರಸ್ವಾಮಿ ರಥೋತ್ಸವ ಶನಿವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ವೀರಭದ್ರ ಸ್ವಾಮಿ ರಥೋತ್ಸವ ಮೇ 2ಕ್ಕೆ ನಿಗದಿಯಾಗಿತ್ತು. ಜನಪದರಲ್ಲಿ ಚಳ್ಳಕೆರೆ ಈರಣ್ಣನ ಪರಿಷೆ ಅಂತಲೇ ಕರೆಯಲ್ಪಡುತ್ತಿರುವ ವೀರಭದ್ರ ಸ್ವಾಮಿ ನಗರದ ಆರಾಧ್ಯ ದೈವ ಎಂದೇ ಇಂದಿಗೂ ಮನೆಮಾತಾಗಿದ್ದಾನೆ.

ಈರಣ್ಣನ ಪರಿಷೆ ಶುರುವಾದಾಗಿನಿಂದಲೂ ಸುಮಾರು ಒಂದು ವಾರದಿಂದ ಈರಣ್ಣನ ಭಕ್ತಗಣ ಅಂದರೆ ಕೈವಾಡಸ್ಥರು ಸೇರಿದಂತೆ ಒಂದೊಂದು ಕೈಂಕರ್ಯ ಮಾಡುವವರೂ ಸಹ ಅತ್ಯಂತ ಶ್ರದ್ಧೆ ಭಕ್ತಿಯಿಂದ ಪರಿಷೆ ಮಾಡುವುದುಂಟು. ಇಂತಹ ಈರಣ್ಣನ ತೇರಿಗೆ ಚಳ್ಳಕೆರೆ ತಾಲೂಕಿನ ಸುತ್ತಲ ಹಳ್ಳಿಗಳ ಜನರೂ ಸೇರುವುದುಂಟು. ಅಲ್ಲದೇ ನೆರೆಯ ಆಂಧ್ರ ತೆಲಂಗಾಣದಿಂದಲೂ ಜನರು ಆಗಮಿಸುವುದುಂಟು. ಈರಣ್ಣನ ತೇರಿಗೆ ಬಾಳೆಹಣ್ಣು ಸೇರಿದಂತೆ ಹರಕೆ ಹೊತ್ತವರು ಇಷ್ಟಾರ್ಥ ಈಡೇರಿಕೆಗಾಗಿ ಎಸೆಯುವುದುಂಟು.

ಈ ಬಾರಿಯ ಚಳ್ಳಕೆರೆಯ ಬಿಸಿಲು ಹತ್ತತ್ತಿರ 40 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿದೆ. ದಿನನಿತ್ಯವೂ ಬಿಸಿಲಿನ ಧಗೆ ಜನರನ್ನು ಹೈರಾಣ ಮಾಡಿದೆ. ಇಂತಹ ಬಿರುಬಿಸಿಲು ಲೆಕ್ಕಿಸದೇ ಭಕ್ತರು ಈರಣ್ಣನ ತೇರಿಗೆ ಸಾಕ್ಷಿಯಾಗಿದ್ದು ಮಾತ್ರ ವಿಶೇಷವಾಗಿ ಕಾಣಿಸುತ್ತಿತ್ತು.

ಬಳ್ಳಾರಿ ರಸ್ತೆಯ ಹಳೇನಗರಕ್ಕೆ ಹೋಗುವ ದಾರಿಯಲ್ಲಿರುವ ವೀರಭದ್ರ ಸ್ವಾಮಿ ದೇಗುಲದಿಂದ ಸಾಗಿದ ವೈಭವಯುತ ತೇರು ಪಾದಗಟ್ಟೆವರೆಗೆ ಸಾಗುವಾಗ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನವೋ ಜನ ಎಂಬಂತೆ ಮನೆಯ ಮಹಡಿಗಳ ಮೇಲೆಲ್ಲಾ ನಿಂತು ಆರಾಧ್ಯ ದೈವನ ತೇರಿಗೆ ಕೈಮುಗಿದು ಪುನೀತರಾಗುತ್ತಿರುವುದು ಕಂಡು ಬಂದಿತು.

*ಅದೃಷ್ಟದ ಈರಣ್ಣನ ತೇರಿನ ಮುಕ್ತಿ ಬಾವುಟ:

ಈರಣ್ಣನ ತೇರಿನ ಮುಕ್ತಿ ಬಾವುಟಕ್ಕೆ ಬಲು ಬೇಡಿಕೆ. ನಾ ಕೂಗಬೇಕು. ನಾ ಪಡೆಯಲೇಬೇಕೆಂಬ ಉತ್ಸಾಹ ಎದ್ದುಕಾಣಿಸುತ್ತಿರುವುದು ಎಲ್ಲಾ ಕಾಲಕ್ಕೂ ನೋಡಬಹುದಾಗಿದೆ. ಈ ಮುಕ್ತಿ ಬಾವುಟ ಪಡೆದವರಿಗೆ ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಅದೃಷ್ಟ ಖುಲಾಯಿಸಲಿದೆ ಎಂಬ ನಂಬಿಕೆ ಈ ಭಾಗದ ಉದ್ಯಮಿಗಳು, ರಾಜಕಾರಣಿಗಳು, ವ್ಯವಹಾರಸ್ಥರಲ್ಲಿ ಮನೆಮಾಡಿದೆ. ಈ ಬಾರಿಯ ಮುಕ್ತಿ ಬಾವುಟವು 9 ಲಕ್ಷಕ್ಕೆ ಎಸ್.ಆರ್.ರುದ್ರಮುನಿಯಪ್ಪ ಅವರು ತಮ್ಮದಾಗಿಸಿಕೊಂಡರು. ಒಟ್ಟಾರೆ ಈ ಬಾರಿಯ ಈರಣ್ಣನ ತೇರು ಸಕಲ ಭಕ್ತರ ಸಹಕಾರದಿಂದ ಸಂಪನ್ನಗೊಂಡಿತು.

*ಕ್ಷೀಣಿಸಿದ ದನಗಳ ಜಾತ್ರೆ:

ಈರಣ್ಣನ ಜಾತ್ರೆಗೆ ದನಗಳ ಜಾತ್ರೆಯೂ ಸೇರುತ್ತಿದ್ದುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದನ್ನು ಕಾಣಬಹುದಿತ್ತು. ಆದರೆ, ದನಗಳ ಸಂಖ್ಯೆಯೇ ಕ್ಷೀಣಿಸಿದ ಹಿನ್ನೆಲೆ ಈರಣ್ಣ ಪರಿಷೆಗೆ ದನಗಳು ಸೇರುವುದು ಕ್ಷೀಣಿಸುತ್ತಾ ಬಂದಿತು. ನೆರೆಯ ಆಂಧ್ರಪ್ರದೇಶದ ಗಡಿಭಾಗಗಳಿಂದಲೂ ಈರಣ್ಣನ ಜಾತ್ರೆಗೆ ದನಗಳ ಬರುತ್ತಿದ್ದವು. ಈಚಿನ ದಿನಗಳಲ್ಲಿ ರೈತಾಪಿಗಳಿಗೆ ಆಸರೆಯಾಗಿದ್ದ ದನಗಳ ಜಾತ್ರೆ ಸೇರುವುದೇ ಕಣ್ಮರೆಯಾದಂತಾಗಿದೆ‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಮಸ್ಯೆ ಮುಂದುವರಿದರೆ ಬೃಹತ್‌ ಪ್ರತಿಭಟನೆ
ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದ ಬಸವಣ್ಣ: ಮಾರನಗೆರೆ ಸಂಗಮೇಶ್