ಪೊಲೀಸ್ ಇಲಾಖೆಯಲ್ಲಿ ಕಳೆದ 30 ವರ್ಷಗಳಿಂದ ದಕ್ಷತೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ರುದ್ರೇಶ್ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಭಾನುವಾರ ಜಿಲ್ಲೆಯ ಜನತೆಯ ಪರವಾಗಿ ಜನಸ್ನೇಹಿ ಪೊಲೀಸ್ ಬಿರುದು ನೀಡಿ ಅದ್ಧೂರಿಯಾಗಿ ನಾಗರಿಕ ಸನ್ಮಾನ ಮಾಡಿದರು.
ರಾಮನಗರ: ಪೊಲೀಸ್ ಇಲಾಖೆಯಲ್ಲಿ ಕಳೆದ 30 ವರ್ಷಗಳಿಂದ ದಕ್ಷತೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ರುದ್ರೇಶ್ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಭಾನುವಾರ ಜಿಲ್ಲೆಯ ಜನತೆಯ ಪರವಾಗಿ ಜನಸ್ನೇಹಿ ಪೊಲೀಸ್ ಬಿರುದು ನೀಡಿ ಅದ್ಧೂರಿಯಾಗಿ ನಾಗರಿಕ ಸನ್ಮಾನ ಮಾಡಿದರು.
ನಗರದ ರಾಮನಗರ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪೊಲೀಸ್ ರುದ್ರೇಶ್ ದಂಪತಿಗೆ ಮೈಸೂರು ಪೇಟಾ ತೊಡಿಸಿ, ಜನಸ್ನೇಹಿ ಪೊಲೀಸ್ ಸ್ಮರಣಿಕೆ ನೀಡಿ ನಿವೃತ್ತ ಐಪಿಎಸ್ ಜ್ಯೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ಕನ್ನಡ, ದಲಿತ, ರೈತ ಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ, ದಂಪತಿ ಮೇಲೆ ಹೂ ಮಳೆ ಸುರಿಸಿದರು.
ಚಿನ್ನದ ಹುಡುಗ ಬಿರುದೇ ದೊಡ್ಡದು:
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, ಪೊಲೀಸರು ತಾವು ಸಮಾಜದ ಭಾಗವೆಂದು ಭಾವಿಸಿ ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದರೆ ಜನರೇ ಗೌರವಿಸುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕಿಂತ ಜನರು ಚಿನ್ನದ ಹುಡುಗ ಅಂತ ನೀಡುವ ಬಿರುದೇ ದೊಡ್ಡದು ಎಂದು ಬಣ್ಣಿಸಿದರು.
ಕಾನೂನು ಪಾಲಿಸಿ, ಅಪರಾಧ ಚಟುವಟಿಕೆ ತಡೆಗಟ್ಟಿ, ಸಾರ್ವಜನಿಕರ ಸುರಕ್ಷತೆಗೆ ಒತ್ತು ನೀಡುವ ಜೊತೆಗೆ ಜನರಲ್ಲಿ ಪೊಲೀಸರ ಬಗ್ಗೆ ಭರವಸೆ ಮೂಡಿಸುತ್ತಿರುವ ರುದ್ರೇಶ್ ಕಾರ್ಯ ಎಲ್ಲ ಪೊಲೀಸರಿಗೂ ಮಾದರಿ. ಇಲಾಖೆಯಲ್ಲಿ 30 ವರ್ಷ ತೋರಿದ ಕರ್ತವ್ಯ ನಿಷ್ಠೆ, ಸ್ವಾಭಿಮಾನದ ಕೆಲಸ ಅವರನ್ನು ಜನಸ್ನೇಹಿಯನ್ನಾಗಿಸಿದೆ ಎಂದು ಹೇಳಿದರು.
ಸಮಾಜದಲ್ಲಿ ಕಾನೂನು, ಶಾಂತಿ ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಆಸ್ತಿ ಕಾಪಾಡುವುದು ಪೊಲೀಸರು ಆದ್ಯ ಕರ್ತವ್ಯ. ಅದನ್ನು ಪಾಲನೆ ಮಾಡಿದಾಗ ಕೆಲವರು ವಿರೋಧಿಗಳಾಗುತ್ತಾರೆ. ಹೀಗಾಗಿ ಸಮಾಜದ ದೃಷ್ಟಿಯಲ್ಲಿ ಪೊಲೀಸರನ್ನು ಕೆಟ್ಟವರಂತೆ ಬಿಂಬಿಸಲಾಗುತ್ತದೆ. ಆದರೆ, ಪೊಲೀಸರೊಳಗೂ ಮಾನವೀಯತೆ ತುಂಬಿದ ಇನ್ನೊಂದು ಮುಖ ಇರುತ್ತದೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದರು.
ಬಿಡದಿ - ಕೂಟಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್ ಮಾತನಾಡಿ, ಪೊಲೀಸ್ ಸೇವೆಯಲ್ಲಿ ರುದ್ರೇಶ್ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಮೈಗೂಡಿಸಿಕೊಂಡು ಮಾದರಿಯಾಗಿದ್ದಾರೆ. ಸಮಾಜದ ಸುರಕ್ಷತೆಯನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸಿ ಅನೇಕ ಪೊಲೀಸರು ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡುತ್ತಾರೆ. ಅಲ್ಲದೆ, ದೀನ ದಲಿತರು, ಅಶಕ್ತರು, ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಭಯಮುಕ್ತ ವಾತಾವರಣ ನಿರ್ಮಿಸುವ ಪೊಲೀಸ್ ವ್ಯವಸ್ಥೆಯ ಭಾಗವಾಗಿ ರುದ್ರೇಶ್ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾ ಶಂಕರ್ ಪಾಟೀಲ್ ಮಾತನಾಡಿ, ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ರುದ್ರೇಶ್, ಕರ್ತವ್ಯದ ಮೂಲಕವೇ ಜನರಿಗೆ ಹತ್ತಿರವಾಗಿದ್ದಾರೆ. ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬಂದ ಇವರು ತಮ್ಮ ಹುದ್ದೆಗೆ ಎಂದೂ ಅಹಂ ತೋರಿದವರಲ್ಲ. ಅವರಲ್ಲಿನ ಜನ ಸೇವೆ ಕಂಡು ಜಿಲ್ಲೆಯ ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳು ಜನಸ್ನೇಯಿ ಬಿರುದು ನೀಡಿ ಗೌರವಿಸುತ್ತಿದೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಮಾತನಾಡಿ, ನಿಷ್ಠಾವಂತ ಅಧಿಕಾರಿಗಳನ್ನು ಜನ ಗುರ್ತಿಸುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಒಬ್ಬ ಪೋಲೀಸ್ ಅಧಿಕಾರಿಗೆ ಸಂಘ ಸಂಸ್ಥೆಗಳಿಂದ ಬಿರುದು ಗೌರವ ಸಿಗುತ್ತಿದೆ ಎಂದರೆ ಅವರ ಸಾಮಾಜಿಕ ಸೇವಾ ಕಾರ್ಯಗಳೇ ಸಾಕ್ಷಿ ಎಂದರು.
ಯರೇಹಳ್ಳಿ ವನಸಿರಿ ಆಶ್ರಮದ ಶ್ರೀ ಶಂಕರ್ ಆರಾಧ್ಯ ಗುರೂಜಿ ಸಾನಿಧ್ಯ ವಹಿಸಿದ್ದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ರೈತ ಸಂಘದ ಮುಖಂಡರಾದ ಚನ್ನಪಟ್ಟಣ ಪುಟ್ಟಸ್ವಾಮಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕನಕಪುರ ನಾಗರಾಜು, ಕರವೇ ಜಿಲ್ಲಾಧ್ಯಕ್ಷ ಎಂ.ಎನ್.ಆರ್.ರಾಜು, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕರವೇ ಸ್ವಾಭಿಮಾನಿ ಬಣ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಜಿಲ್ಲಾಧ್ಯಕ್ಷ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಋಣಾನುಬಂಧ ಇರಬೇಕು. ಇಲ್ಲಿವರೆಗೆ ಸಲ್ಲಿಸಿರುವ ಸೇವೆ ನನಗೆ ತೃಪ್ತಿ ತಂದಿದೆ. ಇಲಾಖೆಯಲ್ಲಿ ಒತ್ತಡ ಹೆಚ್ಚಾಗಿದ್ದು, ಸ್ವತಂತ್ರ್ಯ ಕಡಿಮೆ ಇರುತ್ತದೆ. ಬಹಳಷ್ಟು ಬಾರಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ, ಹಳ್ಳಿ ಜನರು ತೋರುವ ಪ್ರೀತಿಗೆ ಮನಸೋತು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಕರ್ತವ್ಯದಲ್ಲಿದ್ದಾಗ ಪ್ರೀತಿ ವಿಶ್ವಾಸ ತೋರಿ ತಪ್ಪು ಮಾಡಿದವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದೇನೆ. ಎಲ್ಲಿ ಪ್ರೀತಿ ಇರುತ್ತದೊ, ಅಲ್ಲಿ ಕೆಲಸ ಮಾಡಿದರೆ ಸಾರ್ಥಕ ಭಾವ ಮೂಡುತ್ತದೆ. ನಿಮ್ಮೆಲ್ಲರಿಗೂ ಅಭಿಮಾನ ಪೂರಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.