ರಾಮನಗರದಲ್ಲಿ ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ

KannadaprabhaNewsNetwork |  
Published : Oct 26, 2026, 01:15 AM IST
 | Kannada Prabha

ಸಾರಾಂಶ

ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಕಾರ್ಯಕರ್ತರು ವಿಜಯದಶಮಿ ನಿಮಿತ್ತ ಭಾನುವಾರ ನಡೆಸಿದ ಶಿಸ್ತುಬದ್ಧ ಹಾಗೂ ಆಕರ್ಷಕ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಕಾರ್ಯಕರ್ತರು ವಿಜಯದಶಮಿ ನಿಮಿತ್ತ ಭಾನುವಾರ ನಡೆಸಿದ ಶಿಸ್ತುಬದ್ಧ ಹಾಗೂ ಆಕರ್ಷಕ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.

ಸಂಘದ ಸಾಂಪ್ರದಾಯಿಕ ಸಮವಸ್ತ್ರ ಧರಿಸಿದ್ದ ನೂರಾರು ಸ್ವಯಂಸೇವಕರು ನಗರದ ಪ್ರಮುಖ ರಸ್ತೆಗಳಲ್ಲಿ ಸಾಲಾಗಿ ಹೆಜ್ಜೆ ಹಾಕುವ ಮೂಲಕ ಪಥ ಸಂಚಲನದಲ್ಲಿ ಪಾಲ್ಗೊಂಡರು. ಗಣವೇಷಧಾರಿ ಸ್ವಯಂ ಸೇವಕರು ವಾದ್ಯಕ್ಕೆ ತಕ್ಕಹಾಗೆ ಶಿಸ್ತಿನ ಹೆಜ್ಜೆ ಹಾಕಿದ್ದು ಮನಮೋಹಕವಾಗಿತ್ತಲ್ಲದೆ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ಪಥ ಸಂಚಲನವನ್ನು ಕಣ್ತುಂಬಿಕೊಂಡರು.

ಪಥ ಸಂಚಲನ ಸಾಗಿದ ಹಾದಿ:

ನಗರದ ಆರ್‌ಎಸ್‌ಎಸ್‌ ಕಚೇರಿಯಿಂದ ಆರಂಭಗೊಂಡ ಪಥಸಂಚಲನ ರಾಯರದೊಡ್ಡಿ ಸರ್ಕಲ್‌, ಕೆಂಪೇಗೌಡ ಸರ್ಕಲ್‌, ಮಾಗಡಿ ರಸ್ತೆ, ಐಜೂರು ಸರ್ಕಲ್‌, ಹಳೇ ಬಸ್‌ ನಿಲ್ದಾಣ ಹಾಗೂ ಎಂ.ಜಿ. ರಸ್ತೆ ಮಾರ್ಗವಾಗಿ ಸಾಗಿ ಕೊನೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು. ನಗರದ ಪ್ರಮುಖ ಜನನಿಬಿಡ ರಸ್ತೆಗಳಲ್ಲಿ ಸಾಗಿದ ಪಥ ಸಂಚಲನವನ್ನ‌ ವೀಕ್ಷಿಸಲು ನೂರಾರು ಸ್ಥಳೀಯರು ಹಾಗೂ ಸಾರ್ವಜನಿಕರು ಜಮಾವಣೆಗೊಂಡಿದ್ದರು.

ಗಮನಸೆಳೆದ ಪಥ ಸಂಚಲನ:

ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರು ಸಂಘದ ಸಾಂಪ್ರದಾಯಿಕ ಸಮವಸ್ತ್ರ ಧರಿಸಿ ಶಿಸ್ತಿನಿಂದ ಹೆಜ್ಜೆ ಹಾಕಿದರು. ಸಾಲಾಗಿ ಸಾಗಿದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ನಿಗದಿತ ಮಾರ್ಗದಲ್ಲಿ ಮುಂದುವರಿದರು. ಸುಮಾರು ಮೂರು ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿದ ಪಥ ಸಂಚಲನವು ಸಂಘಟಿತ ಚಲನೆ ಮತ್ತು ಶಿಸ್ತುಬದ್ಧ ನಿರ್ವಹಣೆಯಿಂದ ಗಮನ ಸೆಳೆಯಿತು.

ಅದ್ದೂರಿ ಸ್ವಾಗತ:

ಇನ್ನು ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಗಣವೇಷದಾರಿ ಸ್ವಯಂ ಸೇವಕರ ಮೇಲೆ ಜನರು ಹೂಮಳೆ ಸುರಿಸಿ ಸ್ವಾಗತ ನೀಡಿದರು. ನಗರದ ಹಲವೆಡೆ ಆಕರ್ಷಕ ರಂಗೋಲಿ, ಬಣ್ಣಬಣ್ಣದ ಪುಷ್ಪಗಳಿಂದ ಅಲಂಕರಿಸಿ ಭವ್ಯವಾಗಿ ಸ್ವಾಗತಿಸಿದರು. ಪಥಸಂಚಲನ ಮಾರ್ಗದಲ್ಲಿ ಕೇಸರಿ ತೋರಣಗಳು ರಾರಾಜಿಸಿದವು. ರಸ್ತೆಯುದ್ದಕ್ಕೂ ಪಥಸಂಚಲನ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಜೆಸಿಬಿ ಮೂಲಕವೂ ಪುಷ್ಪವೃಷ್ಠಿ ಸುರಿಸಿ ಅದ್ದೂರಿಯಾಗಿ ಗಣವೇಷದಾರಿಗಳನ್ನ ಸ್ವಾಗತಿಸಲಾಯಿತು.

ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಭದ್ರತೆ:

ಆರ್‌ಎಸ್‌ಎಸ್‌ ಪಥಸಂಚಲನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಪಥಸಂಚಲನ ಸಾಗುವ ಮಾರ್ಗದ ಪ್ರಮುಖ ವೃತ್ತಗಳು, ರಸ್ತೆ ಸಂಪರ್ಕ ಸ್ಥಳಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಸಂಚಾರ ವ್ಯವಸ್ಥೆಗೆ ಮುನ್ನೆಚ್ಚರಿಕೆ:

ಪಥ ಸಂಚಲನದ ವೇಳೆ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಹೆಚ್ಚಿನ ಪೊಲೀಸರನ್ಬು ನಿಯೋಜಿಸುವ‌ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆರ್‌ಎಸ್‌ಎಸ್‌ ಸ್ವಯಂ ಸೇವಕರ ಪಥಸಂಚಲನ ಹಿನ್ನಲೆಯಲ್ಲಿ ಪೊಲೀಸರು ನಗರದಾದ್ಯಂತ ಬಿಗಿಭದ್ರತೆ ಒದಗಿಸಿದ್ದರು.

ಆರ್‌ಎಸ್‌ಎಸ್‌ ಪಥ ಸಂಕಲನಕ್ಕೆ ಸಾರ್ವಜನಿಕರ ಪ್ರೋತ್ಸಾಹ

ನಗರದ ಆರ್‌ಎಸ್‌ಎಸ್‌ ಕಚೇರಿಯಿಂದ ಆರಂಭಗೊಂಡು ಹಲವು ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಸಾಗಿದ ಪಥಸಂಚಲನವು ಕೊನೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣ ತಲುಪಿ ಮುಕ್ತಾಯಗೊಂಡಿತು. ಆರಂಭದಿಂದ ಅಂತ್ಯದವರೆಗೆ ನಿಗದಿತ ಮಾರ್ಗದಲ್ಲಿ ಸಾಗಿದ ಪಥ ಸಂಕಲನದಲ್ಲಿ ಸ್ವಯಂ ಸೇವಕರ ಶಿಸ್ತುಬದ್ಧ ಹೆಜ್ಜೆ ಗಣವೇಷದಾರಿಗಳ ದೇಶಭಕ್ತಿಯ ಸಿಂಚನ ಜನರ ಮೆಚ್ಚುಗೆಗೆ ಪಾತ್ರವಾಯಿತು. ನೆರೆದಿದ್ದ ಸಾರ್ವಜನಿಕರು ವಿವಿಧೆಡೆ ಹೂಮಳೆ ಸುರಿಸಿದರೆ ರಸ್ತೆಗಳಲ್ಲಿ ರಂಗೋಲಿ ಚಿತ್ತಾರ ಬಿಡಿಸಿ ಪಥ ಸಂಚಲನವನ್ನು ಸ್ವಾಗತಿಸಲಾಯಿತು. ನಗರದ ನಾಗರಿಕರ ಪ್ರೋತ್ಸಾಹದೊಂದಿಗೆ ಆರ್‌ಎಸ್‌ಎಸ್‌ ವಿಜಯದಶಮಿ ಪಥ ಸಂಚಲನ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಎನ್‌ಕೆ ಮಲ್ಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ
ಮನ್‌ ಕಿ ಬಾತ್‌ನಲ್ಲಿ ಕಲ್ಬುರ್ಗಿಯ ತೊಗರಿ ಘಮ