;Resize=(412,232))
ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಪಿತಾಮಹ ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ತಾಲೂಕು ಘಟಕದ ನೇತೃತ್ವದಲ್ಲಿ ಶನಿವಾರ ನಡೆದ ರೈತ ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ ಬಾಂಡ್‌ಗಳನ್ನು ವಿತರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿ, ಕೆಪಿಸಿಸಿನಲ್ಲಿ ಇದ್ದಂತಹ ಸ್ಟಿಂಗ್ ಆಪರೇಷನ್ ಟೀಮ್ ಈಗ ವಿಧಾನಸೌಧಕ್ಕೆ ಬಂದು ಸೇರಿದೆ. ಇಷ್ಟು ದಿನ ಕೆಪಿಸಿಸಿನಲ್ಲಿ ಇದ್ದಂತಹ ಸ್ಟಿಂಗ್ ಆಪರೇಷನ್ ಪಿತಾಮಹ ಈಗ ವಿಧಾನಸೌಧ ಸೇರಿಕೊಂಡಿದ್ದಾರೆ. ಸ್ಟಿಂಗ್ ಆಪರೇಷನ್ ನ ಪಿತಾಮಹ ಯಾರು ಅಂತ ಎಲ್ಲರಿಗೂ ಗೊತ್ತಿದೆ ಸಿಎಂ ಡಿ.ಕೆ.ಶಿವಕುಮಾರ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನವರೇ ಮಾಡಿದ್ದಾರೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಈಗಲಾದರೂ ಡಿ.ಕೆ.ಶಿವಕುಮಾರ್ ಅವರು ಪ್ರಕರಣದ ಸಮಗ್ರ ತನಿಖೆಗೆ ಆದೇಶ ನೀಡಲಿ ಎಂದು ಆಗ್ರಹಿಸಿದರು.
ತೀವ್ರ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ರೈತರ ಹಿತವನ್ನು ಕಡೆಗಣಿಸುವ ಮೂಲಕ ರಾಜ್ಯ ಸರ್ಕಾರ ತನ್ನ ರೈತ ವಿರೋಧಿ ಧೋರಣೆಯನ್ನು ಮುಂದುವರಿಸಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಒದಗಿಸಿರುವ ಮಹತ್ವದ ಫಸಲ್ ಬಿಮಾ ಯೋಜನೆಯಡಿ ದೊಡ್ಡಬಳ್ಳಾಪುರ ತಾಲೂಕಿನ 4 ಸಾವಿರಕ್ಕೂ ಅಧಿಕ ಕೃಷಿಕರಿಗೆ ಬೆಳೆ ವಿಮೆ ಪ್ರೀಮಿಯಂ ತುಂಬಿರುವ ಸ್ಥಳೀಯ ಶಾಸಕರ ರೈತ ಕಾಳಜಿ ಅನನ್ಯವಾದದ್ದು ಎಂದು ಹೇಳಿದರು.