ಜನ ವಿರಾಮ ನೀಡಿರುವುದು ಅಭಿವೃದ್ಧಿಗೆ, ನನಗಲ್ಲ: ಡಿ.ಕೆ.ಸುರೇಶ್

KannadaprabhaNewsNetwork |  
Published : Jun 12, 2024, 12:35 AM IST
ಪೊಟೋ೧೧ಸಿಪಿಟಿ೧: ತಾಲೂಕಿನ ಕೆಂಗಲ್ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಭೆಯಲ್ಲಿ ಇತ್ತೀಚಿಗೆ ವಿಧಾನಪರಿಷತ್‌ಗೆ ಆಯ್ಕೆಯಾದ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣದ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನ ತತ್ವ- ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬಂದವರು ಹಾಗೂ ನಮ್ಮ ಕಾರ್ಯಕರ್ತರು ಹೋರಾಟ ಮಾಡಿ, ನಿರೀಕ್ಷೆಗೂ ಮೀರಿ ಮತ ಗಳಿಸುವಂತೆ ಮಾಡಿದ್ದಾರೆ. ಇದಕ್ಕೆ ತಾಲೂಕಿನ ಎಲ್ಲ ಮತದಾರರು ಹಾಗೂ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕಳೆದ ಮೂರು ಅವಧಿಯಲ್ಲಿ ಸಂಸದನಾಗಿ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದೆ, ಜನ ನನಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ವಿರಾಮ ನೀಡಿದ್ದಾರೆ. ಜನ ವಿರಾಮ ನೀಡಿರುವುದು ಅಭಿವೃದ್ಧಿಗೆ ಹೊರತು ನನಗಲ್ಲ. ಸೋಲಿನ ಹೊಣೆ ನಾನೇ ಹೊರುತ್ತೇನೆ, ಯಾರನ್ನು ಹೊಣೆ ಮಾಡುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಕೆಂಗಲ್ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಜನ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಎಲ್ಲರೂ ಒಗ್ಗೂಡಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡೋಣ. ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು, ಆ ಕುರಿತು ಬೇಜಾರಿಲ್ಲ. ನಿಮ್ಮ ಜತೆ ನಿಂತು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಿರೀಕ್ಷೆಗೂ ಮೀರಿ ಬೆಂಬಲ:

ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣದ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನ ತತ್ವ- ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬಂದವರು ಹಾಗೂ ನಮ್ಮ ಕಾರ್ಯಕರ್ತರು ಹೋರಾಟ ಮಾಡಿ, ನಿರೀಕ್ಷೆಗೂ ಮೀರಿ ಮತ ಗಳಿಸುವಂತೆ ಮಾಡಿದ್ದಾರೆ. ಇದಕ್ಕೆ ತಾಲೂಕಿನ ಎಲ್ಲ ಮತದಾರರು ಹಾಗೂ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಕೈ ಹಿಡಿದ ಚನ್ನಪಟ್ಟಣ ಮತದಾರು:

ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ಕ್ಷೇತ್ರಗಳ ಕುರಿತು ಈ ಬಾರಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ನನ್ನ ನಿರೀಕ್ಷೆಯಂತೆ ಮತ ನೀಡಿದ್ದು ಚನ್ನಪಟ್ಟಣದ ಜನ ಮಾತ್ರ. ನಾನು ಮೊದಲ ಬಾರಿ ಲೋಕಸಭಾ ಚುನಾವಣೆಗೆ ಚನ್ನಪಟ್ಟಣದಿಂದ ಸ್ಪರ್ಧಿಸಿದಾಗ ಅಷ್ಟು ಪರಿಚಿತನಾಗಿರಲಿಲ್ಲ. ಅಂದು ಅನಿವಾರ್ಯವಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೂ ಮೊದಲ ಚುನಾವಣೆಯಲ್ಲಿಯೇ ಜನ ನನ್ನನ್ನು ಚುನಾಯಿಸಿದರು. ಆದರೆ, ಈ ಬಾರಿ ವ್ಯತಿರಿಕ್ತ ಫಲಿತಾಂಶ ಎದುರಾಗಿದೆ ಎಂದರು. ಜನರ ಕೆಲಸಕ್ಕಾಗಿ ಅಧಿಕಾರಿಗಳಿಗೆ ಬೈಯುತ್ತಿದ್ದೆ:

ಜನರ ಕಷ್ಟಕ್ಕೆ ಸ್ಪಂದಿಸಿದೆ. ಜನರ ಕಷ್ಟ ಪರಿಹರಿಸಲು ಕೆಲಸ ಮಾಡಿದೆ. ಅಧಿಕಾರಿಗಳು ನೀಡುವ ಕಿರುಕುಳಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲೇ ಶ್ರಮಿಸಿದೆ. ಯಾವ ಪಕ್ಷ, ಯಾವ ಜಾತಿ ಎಂದು ನೋಡದೇ ಎಲ್ಲರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸಿದೆ. ನಾನು ಅಧಿಕಾರಿಗಳಿಗೆ ನನ್ನ ಕೆಲಸ ಮಾಡಿಸಿಕೊಳ್ಳಲು ಬೈಯುತ್ತಿರಲಿಲ್ಲ. ಜನರ ಕೆಲಸಕ್ಕಾಗಿ ಅವರಿಗೆ ಬೈಯುತ್ತಿದ್ದೆ. ಜನರ ರಕ್ತ ಹೀರುತ್ತಿದ್ದವರಿಗೆ ಬೈದಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸುತ್ತಿದ್ದೆ ಎಂದು ತಿಳಿಸಿದರು.

ಜಾತಿ ಅಡ್ಡಬರುತ್ತದೆ ಅಂದುಕೊಳ್ಳಲಿಲ್ಲ:

ಕ್ಷೇತ್ರದಲ್ಲಿ ಸಾಕಷ್ಟು ಚೆಕ್ ಡ್ಯಾಂ ನಿರ್ಮಿಸುವ ಮೂಲಕ ನೀರಿನ ಸಮಸ್ಯೆ ಪರಿಹರಿಸಲು ಶ್ರಮಿಸಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯು ಶೇ.೯೬ರಷ್ಟು ಫಲಾನುಭವಿಗಳಿಗೆ ತಲುಪಿರುವುದಕ್ಕೆ ನನ್ನ ಶ್ರಮವೇ ಕಾರಣ. ನಾನು ಎಲ್ಲೂ ಜಾತಿ ನೋಡಲಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ನನಗೆ ಜಾತಿ ಅಡ್ಡ ಬರುತ್ತದೆ ಅಂದುಕೊಂಡಿರಲಿಲ್ಲ. ಭಾವನಾತ್ಮಕ ವಿಚಾರ ಕೆಲಸ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ನಾನೇನು ತಪ್ಪು ಮಾಡಿದೆ ಎಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೇನು ಕೆಲ ತಿಂಗಳಲ್ಲೇ ಜಿಪಂ ಹಾಗೂ ತಾಪಂ ಚುನಾವಣೆ ಎದುರಾಗಲಿವೆ. ಅದಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಸ್ಥಳೀಯ ನಾಯಕತ್ವ ಬೆಳೆಸುವ ಕೆಲಸ ಮಾಡಿ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಜತೆ ನಿಲ್ಲುತ್ತೇನೆ ಎಂದು ತಿಳಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜಿಲ್ಲೆಯ ಜನ ಸಹಕರಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳು ನಿಲ್ಲುವ ಕುರಿತು ವದಂತಿ ಇದೆ. ಆದರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ರಾಮೋಜಿಗೌಡ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ಸುನೀಲ್, ಮುಖಂಡರಾದ ದುಂತೂರು ವಿಶ್ವನಾಥ್ ಇತರರು ಇದ್ದರು.

ಎಚ್ ಡಿಕೆ ರಾಜೀನಾಮೆ ನೀಡುವುದಿಲ್ಲ ಎಂದು ಭಾವಿಸಿದ್ದೇನೆ :

ಚನ್ನಪಟ್ಟಣ ಕ್ಷೇತ್ರಕ್ಕೆ ಅವರು ರಾಜೀನಾಮೆ ನೀಡಿದರೆ ಉಪಚುನಾವಣೆ ಬರುತ್ತದೆ. ಅವರು ರಾಜೀನಾಮೆ ನೀಡುವರೋ ಇಲ್ಲವೋ ಗೊತ್ತಿಲ್ಲ. ಅಧಿಕಾರ ಮುಖ್ಯವಲ್ಲ, ಚನ್ನಪಟ್ಟಣ ಸ್ವಾಭಿಮಾನಿ ಮತದಾರರ ಗೌರವ ಮುಖ್ಯ ಎಂದು ಭಾವಿಸಿ ನಿಮ್ಮನ್ನು ಅವರು ಉಳಿಸಿಕೊಳ್ಳುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುರಿತು ಮಾಜಿ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಇಲ್ಲಿನ ಜನ ಕುಮಾರಸ್ವಾಮಿಯವರ ಕಷ್ಟಕಾಲದಲ್ಲಿ ಕೈಹಿಡಿದ ಹಿನ್ನೆಲೆಯಲ್ಲಿ ನಿಮ್ಮ ಮೇಲಿನ ಪ್ರೀತಿಯಿಂದ ಕ್ಷೇತ್ರವನ್ನು ಉಳಿಸಿಕೊಳ್ಳುವರು ಎಂಬ ನಂಬಿಕೆ ಇದೆ. ಕುಮಾರಸ್ವಾಮಿಯವರು ಒಂದು ಕಣ್ಣು ಅಲ್ಲಿದೆ, ಒಂದು ಕಣ್ಣು ಇಲ್ಲಿದೆ ಅನ್ನುತ್ತಿದ್ದರು. ಆದ್ದರಿಂದ ಅವರಿಗೆ ಅಧಿಕಾರ ಮುಖ್ಯವಲ್ಲ, ನೀವು ಮುಖ್ಯವಾಗುತ್ತೀರಾ, ಮಣ್ಣಿನ ಮಕ್ಕಳಿಗೆ ಗೌರವ ಕೊಡುವ ಕೆಲಸವನ್ನು ಅವರು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಎಚ್‌ಡಿಕೆ ಹೆಸರೇಳದೇ ಸುರೇಶ್ ಕಾಲೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!