ನೀಟ್‌ ಪರೀಕ್ಷೆಯಲ್ಲಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹ

KannadaprabhaNewsNetwork | Published : Jun 12, 2024 12:35 AM

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನೀಟ್ –ಯುಜಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರುದ್ಧ ಕೂಡಲೇ ಸಿಬಿಐ ತನಿಖೆಗೆ ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೀಟ್ –ಯುಜಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರುದ್ಧ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ತರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನೀಟ್-ಯುಜಿ ಪರೀಕ್ಷೆ ನಡೆಸುವಲ್ಲಿ ಮತ್ತು ಮೌಲ್ಯಮಾಪನ ಮಾಡುವಲ್ಲಿ ಎನ್.ಟಿ.ಎ.ಯ ಅಸಮರ್ಥತೆ ಮತ್ತು ಭ್ರಷ್ಟಾಚಾರ ಬಹಿರಂಗವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಲೋಕಸಭೆ ಚುನಾವಣೆ ಫಲಿತಾಂಶದ ದಿನವೇ ನೀಟ್ –ಯುಜಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಎನ್.ಟಿ.ಎ. ಏನನ್ನು ಮರೆಮಾಡಲು ಉದ್ದೇಶಿಸಿದೆ ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆ ನೀಟ್ –ಯುಜಿ ಪರೀಕ್ಷಾ ಪ್ರಕ್ರಿಯೆ ಮತ್ತು ಫಲಿತಾಂಶಗಳ ಮೇಲೆ ಉದ್ಭವಿಸುವ ಪ್ರಶ್ನೆಗಳನ್ನು ಪರಿಹರಿಸಲು ಎಬಿವಿಪಿ ತನಿಖೆಗೆ ಒತ್ತಾಯಿಸಲಾಗಿದೆ. ವಿವಿಧೆಡೆ ಅಕ್ರಮಗಳು ವರದಿಯಾಗಿವೆ. ಪರೀಕ್ಷೆಯ ದಿನವೇ ದೇಶದ ಕೆಲವು ಭಾಗಗಳಲ್ಲಿ ಅಕ್ರಮಗಳು ನಡೆದಿವೆ. ವೈದ್ಯಕೀಯ ಸಂಸ್ಥೆಗಳ ಪ್ರವೇಶಕ್ಕೆ ನಡೆಸುವ ಈ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ಅಪನಂಬಿಕೆ ಇದೆ ಎಂದು ದೂರಿದರು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಪರೀಕ್ಷೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪರೀಕ್ಷೆಯ ಫಲಿತಾಂಶಗಳ ಬಗ್ಗೆ, ನೀಟ್ –ಯುಜಿ ಆಕಾಂಕ್ಷಿಗಳಲ್ಲಿ ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು ಸಿಬಿಐ ತನಿಖೆ ನಡೆಸಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಈ ವರ್ಷದ ನೀಟ್ –ಯುಜಿ ಪರೀಕ್ಷೆಯ ಅನೇಕ ಟಾಪರ್ ಒಂದೇ ಕೇಂದ್ರದಿಂದ ಬಂದಿದ್ದು ಇದು ಈ ವರ್ಷದ ಪರೀಕ್ಷಾ ಫಲಿತಾಂಶದ ಮೇಲೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ನೀಟ್ ಪರೀಕ್ಷೆಯ ನಿರ್ವಹಣೆಯಲ್ಲಿ ಎದ್ದುಕಾಣುವ ಲೋಪದೋಷಗಳಿಗೆ ಪರೀಕ್ಷೆಗಳ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರ ಶಾಹಿಯೇ ಹೊಣೆ ಎಂದು ದೂರಿದರು.

ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಪರೀಕ್ಷೆ ನಡೆಸುವ ಬಗ್ಗೆ, ವಿದ್ಯಾರ್ಥಿಗಳಲ್ಲಿ, ವಿಶ್ವಾಸದ ವಾತಾವರಣ ಮೂಡುವಂತೆ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಸಹ ಕಾರ್ಯದರ್ಶಿ ಅಭಿಷೇಕ್ ಮತ್ತಿತರರು ಇದ್ದರು.

Share this article