ಅಣ್ಣಾಸಾಹೇಬ ತೆಲಸಂಗ
ಕೊರೆಯುವ ಚಳಿ, ಶೀತ ಗಾಳಿಗೆ ರಾಜ್ಯದ ಗಡಿಭಾಗ ತತ್ತರಿಸಿದೆ. ಕಳೆದ ಹತ್ತು ದಿನಗಳಿಂದ ಅಥಣಿ ತಾಲೂಕು ಸೇರಿದಂತೆ ಗಡಿಭಾಗದಲ್ಲಿ ತಂಡಿ ಹಾಗೂ ಚಳಿಗಾಳಿ ಜೋರಾಗಿದ್ದು, ಜನರು ಕಂಗಾಲಾಗಿದ್ದಾರೆ. ಈ ಭಾಗದಲ್ಲಿ 13 ಡಿಗ್ರಿಗೆ ತಾಪಮಾನ ಕುಸಿದಿರುವುದು, ತಣ್ಣನೆ ವಾತಾವರಣಕ್ಕೆ ಕಂಗೆಟ್ಟಿದ್ದಾರೆ. ಅಲ್ಲದೇ, ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಬೆಳಗ್ಗೆ ವಾಯು ವಿಹಾರಕ್ಕೆ, ಬಾವಿಯ ಸ್ನಾನಕ್ಕೆ ಹೋಗುವ ಜನರು, ಉದ್ಯೋಗಿಗಳು, ಕಚೇರಿ ಕೆಲಸಗಳಿಗೆ ತೆರಳುವ ಜನರಂತೂ ಸುಸ್ತಾಗಿ ಹೋಗಿದ್ದಾರೆ. ಸದ್ಯದ ಶೀತ ವಾತಾವರಣದ ಕಾರಣ ವಾಕಿಂಗ್ ತೆರಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಚಳಿಯಿಂದಾಗಿ ಚಿಕ್ಕ ಮಕ್ಕಳನ್ನು ಬೇಗ ಎಬ್ಬಿಸಿ, ಶಾಲೆಗೆ ಕಳಿಸುವುದೇ ಪಾಲಕರಿಗೆ ದೊಡ್ಡ ಸವಾಲಾಗಿದೆ. ಬೆಳಗ್ಗೆ 9 ಗಂಟೆಯಾದರೂ ಚಳಿ ಕಡಿಮೆಯಾಗದಿರುವುದು ಮಕ್ಕಳು ಮನೆಯಿಂದ ಹೊರ ಬರದಂತೆ ಮಾಡಿದೆ. ಆದರೆ, ವಿಪರೀತ ಶೀತ ವಾತಾವರಣವು ಕಡಲೆ ಬೇಳೆ ಬೆಳೆಯುತ್ತಿರುವ ರೈತರಲ್ಲಿ ಹರ್ಷ ತಂದಿದೆ. ಕಡಲೆ ಬೆಳೆಗೆ ಚಳಿ ಹೆಚ್ಚಾದಷ್ಟು ಇಳುವರಿ ಹೆಚ್ಚಾಗಲಿದೆ ಎಂಬುದು ರೈತರ ಅಭಿಪ್ರಾಯ. ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಜನರು ರಸ್ತೆ ಪಕ್ಕದಲ್ಲಿ ಮನೆಗಳ ಮುಂದೆ ಬೆಂಕಿ ಕಾಯಿಸಿಕೊಳ್ಳುವ ಮೂಲಕ ಚಳಿಯಿಂದ ಬಚಾವ್ ಆಗುತ್ತಿದ್ದಾರೆ. ಇದೀಗ ಇದೇ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿದೆ.ಚಳಿಯಿಂದ ಅನಾರೋಗ್ಯ:
ಚಳಿಗಾಲ ಚಳಿಯೊಂದಿಗೆ ರೋಗಗಳನ್ನು ತರುತ್ತಿದೆ ಎಂಬ ಆತಂಕ ಜನರಲ್ಲಿ ಮಾಡಿದ್ದು, ತಾಲೂಕಿನ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಇಬ್ಬನಿ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಬ್ಬನಿಯಲ್ಲಿ ಕೆಲಸ ಮಾಡುವ ನಾಗರಿಕರಿಗೆ ಕೆಮ್ಮು, ಶೀತ, ಜ್ವರ ಆವರಿಸುತ್ತಿದೆ. ಬಹಳಷ್ಟು ಮಂದಿ ನಾಗರಿಕರು ಈ ಇಬ್ಬನಿಯ ಕಾಟ ತಾಳಲಾರದೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಯೋ ವೃದ್ದರು, ಮಹಿಳೆಯರು, ಮಕ್ಕಳಿಗೆ ಈ ಚಳಿ ತೀವ್ರ ಸಂಕಷ್ಟ ತಂದೊಡ್ಡಿದೆ.ದಿನಪತ್ರಿಕೆ ಹಂಚಿಕೆಗೂ ಸಮಸ್ಯೆ:
ಈ ಚಳಿಗಾಳಿಯ ತೀವ್ರತೆಗೆ ಹಾಲು, ಹೂವು, ತರಕಾರಿ ಮಾರಾಟ, ಮನೆ ಮನೆಗೆ ದಿನಪತ್ರಿಕೆಗಳ ಹಂಚಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೂ ಅಡ್ಡಿ ಉಂಟಾಗಿದೆ. ಮೈ ಕೊರೆಯುವ ಚಳಿಯಿಂದಾಗಿ ಗಂಟು ಕಟ್ಟಿ ಇಟ್ಟಿದ್ದ ಉಲ್ಲನ್ ಸ್ವೆಟರ್, ಕಿವಿ ಮತ್ತು ತಲೆಗೆ ಟೋಪಿ ಸೇರಿದಂತೆ ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ಜನರು ಓಡಾಡುವಂತಾಗಿದೆ.-----
ಕೋಟ್ಈ ಬಾರಿ ಶೀತಗಾಳಿ, ಚಳಿಗಾಲದ ಹಿನ್ನೆಲೆಯಲ್ಲಿ ಆದಷ್ಟು ಬೆಚ್ಚನೆಯ ಉಡುಪುಗಳನ್ನು ಧರಿಸಬೇಕು. ಚಳಿ ಕಳೆಯುವವರೆಗೆ ಬಿಸಿಯೂಟ, ಬಿಸಿ ನೀರನ್ನೇ ಸೇವಿಸುವದು ಉತ್ತಮ. ಹವಾಮಾನ ವೈಪರೀತ್ಯದಿಂದ ಕೆಮ್ಮು, ಶೀತ, ಜ್ವರ ಬಾಧಿಸುವ ಸಾಧ್ಯತೆ ಇರುತ್ತದೆ. ಹತ್ತಿರದ ವೈದ್ಯರನ್ನ ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಆರೋಗ್ಯ ಸಲಹೆ ಪಡೆದುಕೊಳ್ಳಬೇಕು.
- ಡಾ.ಬಸಗೌಡ ಕಾಗೆ, ತಾಲೂಕಾ ವೈದ್ಯಾಧಿಕಾರಿ, ಅಥಣಿ.-----
ಕೋಟ್ನಾವು ಪ್ರತಿದಿನ ತೆರೆದ ಬಾವಿ ಮತ್ತು ಕೆರೆಗಳಿಗೆ ಈಜಲು ಹೋಗುತ್ತಿದ್ದೇವು. ಕಳೆದ ಒಂದು ವಾರದಿಂದ ವಿಪರೀತ ಚಳಿಗಾಳಿ ಇರುವುದರಿಂದ ಈಜುವುದನ್ನು ಸ್ಥಗಿತ ಮಾಡಿದ್ದೇವೆ.
- ವಿಲಾಸ ಕುಲಕರ್ಣಿ, ಜಲಯೋಗ ಪಟು.ಕೋಟ್
ಚಿಕ್ಕ ಮಕ್ಕಳನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಶನಿವಾರ ದಿನದಂದು ಬೆಳಿಗ್ಗೆಯೇ ಶಾಲೆಗಳು ಪ್ರಾರಂಭವಾಗುವುದರಿಂದ ಮಕ್ಕಳನ್ನು ತಯಾರಿ ಮಾಡಿ ಚಳಿಯಲ್ಲಿಯೇ ಶಾಲೆಗೆ ಕಳುಹಿಸಬೇಕಿದೆ. ಇದರಿಂದ ಆತಂಕವೂ ಉಂಟಾಗುತ್ತಿದೆ.– ಶೃತಿ ಬೋಮನಾಳ, ಗೃಹಿಣಿ
ಚಳಿ ಮತ್ತು ಇಬ್ಬನಿ ಬೀಳುತ್ತಿರುವುದು ಕಡಲೆ ಬೆಳೆಗೆ ಉತ್ತಮವಾಗಿದೆ. ಚಳಿ ಹೆಚ್ಚಾದಷ್ಟು ಕಡಲೆ ಬೆಳೆಗೆ ಕೀಟಬಾಧೆ ಕಡಿಮೆಯಾಗುತ್ತದೆ. ಇದರಿಂದ ಇಳುವರಿ ಕೂಡ ಹೆಚ್ಚುವ ಸಾದ್ಯತೆ ಇದೆ. ರೈತರಿಗೆ ಅನುಕೂಲ.- ಸಂಗಪ್ಪ ಕರಿಗಾರ, ರೈತ ಮುಖಂಡ.