ಬಿಸಿಲೂರು ಖ್ಯಾತಿಯ ಬಳ್ಳಾರಿಯಲ್ಲೀಗ ಮೈಕೊರೆವ ಚಳಿ ಶುರು : ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ- ಜನ ತತ್ತರ

KannadaprabhaNewsNetwork |  
Published : Nov 29, 2024, 01:04 AM ISTUpdated : Nov 29, 2024, 12:11 PM IST
ಈ ಸುದ್ದಿಗೆ ಪೂರಕವಾದ ಫೋಟೋ ಕಳಿಸಲಾಗಿದೆ.  | Kannada Prabha

ಸಾರಾಂಶ

ಬಿಸಿಲುಂಡು ಬೆಳೆದ ಬಳ್ಳಾರಿಗರಿಗೆ ಕೊರೆವ ಚಳಿಯೀಗ ಬೇಡದ ಅತಿಥಿ.

 ಬಳ್ಳಾರಿ: ಬಿಸಿಲೂರು ಖ್ಯಾತಿಯ ಬಳ್ಳಾರಿಯಲ್ಲೀಗ ಮೈಕೊರೆವ ಚಳಿ ಶುರುವಾಗಿದೆ.

ಕಳೆದ ಒಂದು ವಾರದಿಂದ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಬಿಸಿಲುಂಡು ಬೆಳೆದ ಬಳ್ಳಾರಿಗರಿಗೆ ಕೊರೆವ ಚಳಿಯೀಗ ಬೇಡದ ಅತಿಥಿ.

ಬೆಳಿಗ್ಗೆ ಹಾಗೂ ಸಂಜೆಯಾಗುತ್ತಿದ್ದಂತೆಯೇ ಮಂಜು ಆವರಿಸಿಕೊಳ್ಳುತ್ತಿದ್ದು, ಶೀತ ವಾತಾವರಣ ಅಧಿಕಗೊಳ್ಳುತ್ತಿದೆ. ಹೀಗಾಗಿ ಗಂಟೆ ಎಂಟಾದರೂ ಜನರು ಮನೆಯಿಂದ ಹೊರ ಬಾರದಂತಾಗಿದೆ.

ನಗರದ ಜಿಲ್ಲಾ ಕ್ರೀಡಾಂಗಣ, ಸಾಂಸ್ಕೃತಿಕ ಸಮುಚ್ಚಯ ಆವರಣ, ವಿಮ್ಸ್ ಮೈದಾನ ಸೇರಿದಂತೆ ನಾನಾ ಕಡೆ ಬೆಳಗಿನ ವಾಕಿಂಗ್‌ ಗೆ ತೆರಳುತ್ತಿದ್ದವರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಯೋಗಾಸನ, ವ್ಯಾಯಾಮ ಸೇರಿದಂತೆ ದೈಹಿಕ ಕಸರತ್ತು ಮಾಡಲು ಹೊರಗಡೆ ಬರುತ್ತಿದ್ದವರು ಮನೆಯಲ್ಲಿಯೇ ಮುದುಡಿ ಕೂರುವಂತಾಗಿದೆ.

ಚಳಿ ಎಂದರೆ ಅಲರ್ಜಿ:

ಬಳ್ಳಾರಿ ಜನರಿಗೆ ಚಳಿ ಎಂದರೆ ಅಲರ್ಜಿ. ಬಿಸಿಲೆಂದರೆ ಹೈ ಎನರ್ಜಿ. 40 ಡಿಗ್ರಿ ತಾಪಮಾನದಲ್ಲೂ ರಸ್ತೆಯಲ್ಲಿ ನಿಂತು ಬಿಸಿಬಿಸಿ ಚಹಾ ಹೀರುವ ಇಲ್ಲಿನ ಜನರು ಚಳಿಗಾಲ ಬಂತೆಂದರೆ ಮಂಕಾಗುತ್ತಾರೆ. ಬೆಳಗಿನ ವಾಕಿಂಗ್‌ಗೆ ಗುಡ್ ಬೈ ಹೇಳುತ್ತಾರೆ.

ಇನ್ನು ವಯಸ್ಸಾದವರು ಬಿಸಿಲಿನ ದರ್ಶನವಾದ ಬಳಿಕವೇ ಹೊರಗಡೆ ಕಾಣಿಸಿಕೊಳ್ಳುತ್ತಾರೆ. ಇನ್ನು ಬೆಳಗಿನಜಾವ 4 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗುವ ಪತ್ರಿಕೆ ವಿತರಕರು, ಹಾಲು ಮಾರಾಟಗಾರರು, ಸೊಪ್ಪು-ತರಕಾರಿ ವ್ಯಾಪಾರಿಗಳು ಚಳಿಯಿಂದ ಕಂಗಾಲಾಗಿದ್ದಾರೆ. ಕೊರೆವ ಚಳಿಯಿಂದ ಪಾರಾಗಲು ಸ್ವೆಟರ್‌, ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗಿನಜಾವ ಹಾಗೂ ಸಂಜೆ ಹೊತ್ತಿನ ಮಂಜು ಕವಿದ ವಾತಾವರಣ ಮತ್ತಷ್ಟು ಕೂಲ್‌ಕೂಲ್ ಮಾಡಿದೆ.

ಬೆಳಗಿನಜಾವ 3 ಗಂಟೆಯಿಂದಲೇ ಶುರುಗೊಳ್ಳುವ ನಗರದ ಎಪಿಎಂಸಿಯ ತರಕಾರಿ ಮಾರುಕಟ್ಟೆಯ ಮೇಲೂ ಚಳಿರಾಯನ ಪ್ರಭಾವ ಬೀರಿದೆ. ಚಳಿಯನ್ನು ಲೆಕ್ಕಿಸದೇ ಮಾರುಕಟ್ಟೆಗೆ ಬಂದಿಳಿಯುವ ವ್ಯಾಪಾರಿಗಳಿಗೆ ಗ್ರಾಹಕರ ಕೊರತೆ ಎದುರಾಗಿದೆ. ಬೆಳಿಗ್ಗೆ 9 ಗಂಟೆ ಬಳಿಕವೇ ಗ್ರಾಹಕರು ಮಾರುಕಟ್ಟೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇದು ವ್ಯಾಪಾರಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಚಳಿಯಿಂದ ಪಾರಾಗಲು ನಾನಾ ಕಸರತ್ತು:

ಚಳಿಯಿಂದ ಪಾರಾಗಲು ಮಕ್ಕಳು, ಮಹಿಳೆಯರು ಬೆಚ್ಚಗಿನ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸಹಜವಾಗಿ ಚಳಿಗಾಲದ ಉಡುಪುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಶೀತ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಂಜೆಯಾಗುತ್ತಿದ್ದಂತೆಯೇ ಮನೆಯ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿರುವ ನಗರದ ನಿವಾಸಿಗಳು ಚಳಿಯಿಂದ ಪಾರಾಗಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಚಳಿರಾಯನ ಆರ್ಭಟಕ್ಕೆ ಬಿಸಿಲೂರು ಬಳ್ಳಾರಿಯ ಉಸ್ತುವಾರಿ ಹೊತ್ತಿರುವ ಸೂರ್ಯದೇವನೇ ದಂಗಾಗಿದ್ದಾನೆ. ಹೀಗಾಗಿಯೇ ಬೆಳಿಗ್ಗೆ 8 ಗಂಟೆ ಬಳಿಕ ದರ್ಶನ ನೀಡುತ್ತಿದ್ದಾನೆ. ಕಳೆದ ವಾರದಿಂದ ಚಳಿಯ ಅನುಭವ ತೀವ್ರವಾಗುತ್ತಿದೆ. ಶಿವರಾತ್ರಿ ಕಳೆಯುವವರೆಗೆ ಚಳಿ ಮುಂದುವರಿಯಲಿದ್ದು, ಕನಿಷ್ಠ ತಾಪಮಾನದಿಂದ ಜನ ಒದ್ದಾಡುತ್ತಿದ್ದಾರೆ. ಅಲ್ಲಲ್ಲಿ ಬಿದ್ದ ಪೇಪರ್, ಒಣಗಿದ ಮರದ ಎಲೆ, ಕಸಕಡ್ಡಿಗಳನ್ನು ಗುಡ್ಡೆ ಹಾಕಿ ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿವೆ.

ಚಳಿಗಾಲದಲ್ಲಿ ಆರೋಗ್ಯದಲ್ಲಾಗುವ ಏರುಪೇರುಗಳ ಕಡೆ ಗಮನ ನೀಡಬೇಕು. ತೀವ್ರ ಚಳಿಯಿಂದ ವೃದ್ಧರು, ಮಕ್ಕಳು ಹಾಗೂ ನವಜಾತ ಶಿಶುಗಳಿಗೆ ಆರೋಗ್ಯದಲ್ಲಿ ಒಂದಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಮುಂಜಾಗ್ರತೆ ವಹಿಸಬೇಕು. ಬೆಚ್ಚನೆಯ ಉಡುಪುಗಳನ್ನು ಧರಿಸುವ ಮೂಲಕ ಚಳಿಯಿಂದ ರಕ್ಷಣೆ ಪಡೆದುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೈ. ರಮೇಶ್‌ಬಾಬು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!